ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೆ ಚಿರತೆ ದಾಳಿ ಮಾಡಿದ್ದು, ದಾಳಿಗೆ 8 ವರ್ಷದ ಬಾಲಕ ಸಾವನ್ನೆನಪ್ಪಿದ್ದಾನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪೋಷಕರೊಂದಿಗೆ ಪಾದಯಾತ್ರೆ ತೆರಳುತ್ತಿದ್ದ ಬಾಲಕ ಚಿರತೆ ದಾಳಿಯಲ್ಲಿ ಬಲಿಯಾಗಿದ್ದಾನೆ.
ಇದೇ ಜನವರಿ ಮತ್ತು ಫೆಬ್ರವರಿಯಲ್ಲಿ ಈ ನರ ಭಕ್ಷಕ ಚಿರತೆ ದಾಳಿಗೆ ಎರಡು ಜೀವಗಳು ಬಲಿಯಾಗಿದ್ದವು. ಈಗ ಮತ್ತೊಮ್ಮೆ ಅಂತದ್ದೇ ಭೀಕರ ಘಟನೆ ನಡೆದಿದ್ದು, ಬೆಂಗಳೂರು ಮೂಲದ ಎಂಟು ವರ್ಷದ ಬಾಲಕ ಹರ್ಷಿತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ.
ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ತೆರಳುತ್ತಿದ್ದ. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ದಟ್ಟ ಅರಣ್ಯದ ಹಾದಿಯಲ್ಲಿ ಸಾಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಕಾಡಿನೊಳಗೆ ಎಳೆದೊಯ್ದಿದೆ. ಕುಟುಂಬಸ್ಥರು ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಬಾಲಕನ ಮೃತದೇಹ ಪತ್ತೆಯಾಗಿದ್ದು, ಚಿರತೆಯು ಬಾಲಕನನ್ನು ಕೊಂದು ತಿಂದು ತೇಗಿದೆ. ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಕರಲ್ಲಿ ಭೀತಿ ಹುಟ್ಟಿಸಿದೆ.
ಜನವರಿ 21ರಂದು ಮಂಡ್ಯ ಜಿಲ್ಲೆಯ ಚೀರನಹಳ್ಳಿಯ ಪ್ರವೀಣ್ ಎಂಬ ಭಕ್ತ ತಾಳುಬೆಟ್ಟದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದರು. ಇದಾದ ಬೆನ್ನಲ್ಲೇ ಫೆಬ್ರವರಿಯಲ್ಲಿ ಚನ್ನಪಟ್ಟಣದ ಶ್ರೇಯಸ್ (8) ಎಂಬ ಬಾಲಕನ ಮೇಲೆಯೂ ಇದೇ ಮಾರ್ಗದಲ್ಲಿ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದ. ಈ ಹಿಂದೆ ಟಿ. ನರಸೀಪುರ ಮತ್ತು ಹನೂರು ಭಾಗಗಳಲ್ಲಿ ಸರಣಿ ಸಾವುಗಳು ಸಂಭವಿಸಿದ್ದು, ಅರಣ್ಯ ಇಲಾಖೆ ‘ಲೆಪರ್ಡ್ ಟಾಸ್ಕ್ ಫೋರ್ಸ್’ ಮೂಲಕ ಕಾರ್ಯಾಚರಣೆ ನಡೆಸಿ ನರಭಕ್ಷಕ ಚಿರತೆಗಳನ್ನು ಸೆರೆಹಿಡಿದಿತ್ತು. ಇದೆಲ್ಲದರ ಬೆನ್ನಲ್ಲೇ ಮತ್ತೊಮ್ಮೆ ಇದೇ ಮಾರ್ಗದಲ್ಲಿ ಚಿರತೆ ಬಾಲಕನನ್ನು ಬಲಿ ಪಡೆದಿರುವುದು ಆತಂಕಕ್ಕೆ ಕಾರಣವಾಗಿದೆ.



