ಹನಗೋಡು: ಇಲ್ಲಿನ ಗುರುಪುರ ಗ್ರಾಪಂ ವ್ಯಾಪ್ತಿಯ ಕಾಳೆನಹಳ್ಳಿಯ ಜಮೀನಿನಲ್ಲಿ ಚಿರತೆ ಅಡ್ಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ರೈತರು ಆತಂಕದಲ್ಲಿದ್ದಾರೆ.
ಗ್ರಾಮದ ನಟೇಶ್ ಹಾಗೂ ಅಕ್ಕಪಕ್ಕದ ಜಮೀನಿನ ಅಲ್ಲಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಆತಂಕಗೊಂಡ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಇದು ಚಿರತೆ ಹೆಜ್ಜೆಯಾಗಿದ್ದು, ಕಾಳೇನಹಳ್ಳಿಗೆ ಸಮೀಪದ ಬಲ್ಲೇನಹಳ್ಳಿಯಲ್ಲಿ ಚಿರತೆಯು ಕೋಳಿ ಹಾಗೂ ಬೀದಿನಾಯಿಯನ್ನು ಭೇಟೆಯಾಡಿರುವ ಬಗ್ಗೆ ಮಾಹಿತಿ ಇದ್ದು, ಚಿರತೆ ಸೆರೆಗೆ ಎರಡೂ ಗ್ರಾಮಗಳ ಮದ್ಯದಲ್ಲಿ ಬೋನ್ ಇಡಲಾಗಿದೆ ಎಂದು ಆರ್‌ಎಫ್‌ಓ ನಂದಕುಮಾರ್ ತಿಳಿಸಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.