ಮೈಸೂರು: ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಇನ್ಫೊಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯು ಸ್ಥಗಿತಗೊಳಿಸಿದೆ.
ಡಿಸೆಂಬರ್ ೩೧ರಂದು ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಬಹುತೇಕ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸಕ್ಕೆ ಸೂಚಿಸಿತ್ತು. ಅರಣ್ಯ ಇಲಾಖೆಯು ತಂಡಗಳನ್ನು ರಚಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು. ಚಿರತೆಯ ಚಲನವಲನ ಗುರುತಿಸಲು ಅಲ್ಲಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿತ್ತು. ಇಲಾಖೆಯ ೮೦ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಆದರೆ ಕಳೆದ ೧೦ ದಿನಗಳಿಂದ ಕ್ಯಾಂಪಸ್‌ನಲ್ಲಿ ಎಲ್ಲಿಯೂ ಚಿರತೆಯ ಹೆಜ್ಜೆ ಗುರುತು ಕಾಣಿಸಿಲ್ಲ. ಅದರ ಇರುವಿಕೆಯ ಕುರುಹುಗಳು ಸಿಕ್ಕಿಲ್ಲ. ಹೀಗಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ತಿಳಿಸಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕಂಪನಿಗೆ ಸಲಹೆ ನೀಡಿದ್ದು, ರಾತ್ರಿ ವೇಳೆ ಥರ್ಮಲ್ ಡ್ರೋನ್ ಬಳಸಿ ಕ್ಯಾಂಪಸ್‌ನಲ್ಲಿ ನಿರಂತರ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.