ಚಿತ್ರದುರ್ಗ: ಕುಷ್ಠರೋಗ ಮಾರಣಾಂತಿಕ ರೋಗವಲ್ಲ. ಚಿಕಿತ್ಸೆಯಿಂದ ಗುಣಮುಖ ಹೊಂದಬಹುದು ಎಂದು ತಾಲ್ಲೂಕು ಕುಷ್ಠರೋಗ ಮೇಲ್ವಿಚಾರಣಾ ಅಧಿಕಾರಿ ವೈ.ತಿಪ್ಪೇಶ್ ಹೇಳಿದರು. ಇಲ್ಲಿನ ಬುದ್ಧ ನಗರ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಆರೋಗ್ಯ ಕ್ಷೇಮ ಉಪ ಕೇಂದ್ರಗಳ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ ಮೇಲ್ವಿಚಾರಣ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಕುಷ್ಠರೋಗದ ನಿರ್ಮೂಲನೆಯನ್ನು ಸಾಧಿಸಲಾಗಿದೆಯಾದರೂ, ಇನ್ನೂ ಕೆಲವು ವರ್ಷಗಳವರೆಗೆ ಹೊಸ ಪ್ರಕರಣಗಳು ಸಂಭವಿಸುತ್ತಲೇ ಇರುತ್ತವೆ. ಸಮಾಜದಲ್ಲಿ ಮತ್ತೆ ರೋಗ ಕಾಣಿಸಿಕೊಳ್ಳದಂತೆ ನಿರಂತರ ನಿಗಾ ವಹಿಸಬೇಕು. ಆರಂಭದಲ್ಲಿ ವಾರ್ಷಿಕ ಹೊಸ ಪ್ರಕರಣ ಪತ್ತೆ ದರ ಗಮನಾರ್ಹ ಕುಸಿತ ತೋರಿಸಿದೆ ಎಂದರು . ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ ರಾಜ್ಯದಾದ್ಯಂತ ನವೆಂಬರ್ 15 ರಿಂದ ಡಿಸೆಂಬರ್ 2 ರವರಗೂ ನಡೆಯಲಿದ್ದು, ಪೂರ್ವಭಾವಿಯಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸೂಕ್ಷ್ಮ ಕ್ರಿಯಾ ಯೋಜನೆ ತಯಾರಿಸಿ ಸಮೀಕ್ಷೆ ನಡೆಸಲು ಸಂಬಂಧಿಸಿದ ಕ್ಷೇತ್ರ ಸಿಬ್ಬಂದಿಗಳಿಗೆ ತರಬೇತಿ ಹಮ್ಮಿಕೊಳ್ಳುವಂತೆ ಮತ್ತು ಮೇಲ್ವಿಚಾರಣ ಚೆಕ್‍ಲಿಸ್ಟ್ ತಯಾರಿಸಿಕೊಳ್ಳಲು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ನರಗಳ ತಪಾಸಣೆ, ಮಚ್ಚೆಗಳ ತಪಾಸಣೆ, ಮಾಹಿತಿ ಶಿಕ್ಷಣ ಸಂವಹನ ಸಮುದಾಯದೊಂದಿಗೆ ನಡೆಸುವ ರೀತಿ, ಇತರೆ ಪೂರ್ವಸಿದ್ಧತೆಗಳ ಬಗ್ಗೆ ತಿಳಿಸಿದರು. ತರಬೇತಿ ಕಾರ್ಯಗಾರದಲ್ಲಿ ಬುದ್ಧನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗಂಗಾಧರೆಡ್ಡಿ, ಗುರುಮೂರ್ತಿ, ರಂಗಾರೆಡ್ಡಿ, ಚಿತ್ರದುರ್ಗ ತಾಲ್ಲೂಕಿನ ಎಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳು ಇದ್ದರು.