ಗುಂಡ್ಲುಪೇಟೆ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಗಮನ ಹರಿಸುವ ಫೋಕ್ಸೊ ಕಾಯ್ದೆ ಬಗ್ಗೆ ಮಕ್ಕಳು ಹಾಗೂ ಪೋಷಕರು ತಿಳಿದುಕೊಳ್ಳಬೇಕು ಎಂದು ವಕೀಲ ಯೋಗಿಶ್ ಹೇಳಿದರು.
ತಾಲೂಕಿನ ಶಿಂಡನಪುರ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿವಿಧ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬಾಲ್ಯ ವಿವಾಹ, ಬಾಲ ಕಾರ್ಮಿಕ ಮತ್ತು ಫೋಕ್ಸೊ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಾಲ್ಯವಿವಾಹ ಕಾಯ್ದೆ, ಬಾಲ ಕಾರ್ಮಿಕ ಕಾಯ್ದೆ ಮತ್ತು ಬಾಲ ನ್ಯಾಯ ಮಂಡಳಿಗಳಲ್ಲಿ ಅಪಾದಿತರ ವಿಚಾರಣೆ, ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳಿಗೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರೂಪಿಸಿರುವ ಯೋಜನೆಯಲ್ಲಿ ದೊರೆಯುವ ಪರಿಹಾರ ಕುರಿತು ಮಾಹಿತಿ ನೀಡಿದರು.
ಮಕ್ಕಳು ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸಲು ಅನುಕೂಲಕರ ವಾತಾವರಣ ಸೃಷ್ಟಿಸಿ ಕೊಡುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಈ ಕಾರಣದಿಂದ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ದತಿಯನ್ನು ನಿಷೇಧಗೊಳಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯು ಮಕ್ಕಳ ಶ್ರೇಯೊಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ದೌರ್ಜನ್ಯಕ್ಕೊಳಗಾದ ಮಕ್ಕಳ ಸಹಾಯ ವಾಣಿ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸಂಪರ್ಕಿಸಬೇಕು ಎಂದರು.
ಹೆಣ್ಣು ಮಕ್ಕಳಿಗಾಗಿ ಸರ್ಕಾರ ಶೈಕ್ಷಣಿಕ ಸೌಲಭ್ಯ ಒದಗಿಸುತ್ತಿರುವ ಬಗ್ಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಯಾವ ಸ್ಥಳದಲ್ಲಾದರು ಬಾಲ ಕಾರ್ಮಿಕರು ಕಂಡು ಬಂದಲ್ಲಿ ದೂರು ನೀಡುವ ಮೂಲಕ ಸಾರ್ವಜನಿಕರು ಸಹಕರಿಸಬೇಕು. ಬಾಲ ಕಾರ್ಮಿಕತೆಯಿಂದ ಮಕ್ಕಳನ್ನು ಮುಕ್ತಗೊಳಿಸಿ ಉತ್ತಮ ಶಿಕ್ಷಣ ನೀಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರಾದ ಅರವಿಂದ್, ಸಮಷ್ಟಿ ಸಮಗ್ರ ಅಭಿವೃದ್ಧಿ ಟ್ರಸ್ಟ್ ಸಂಯೋಜಕ ಗಂಗಾಧರ ಸೇರಿದಂತೆ ಶಿಂಡನಪುರ ಗ್ರಾಪಂ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.