ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜೀನಾಮೆಗೆ ಪ್ರತಿಪಕ್ಷಗಳು ಪಟ್ಟುಹಿಡಿದಿದ್ದು, ಇದರ ಜೊತೆಗೆ ಇದೀಗ ಸ್ವಪಕ್ಷೀಯರಿಂದಲೂ ಸಿದ್ದರಾಮಯ್ಯ ರಾಜೀನಾಮೆ ಕೂಗು ಕೇಳಿಬಂದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಕೋಳಿವಾಡ ಅವರು, ಸಿದ್ದರಾಮಯ್ಯ ಉತ್ತಮ ನಾಯಕ. ಅವರು, ಎಷ್ಟೇ ಕಳಂಕರಹಿತರಾಗಿದ್ದರೂ ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡಲಿ, ತನಿಖೆ ಮುಗಿಸಿ ಕ್ಲೀನ್ ಚಿಟ್ ಪಡೆದ ಬಳಿಕ ಮತ್ತೆ ಸಿಎಂ ಆಗಲಿ. ಪಕ್ಷದ ೧೩೬ ಶಾಸಕರು ಸಿಎಂ ಸಿದ್ದರಾಮಯ್ಯ ಜತೆಗಿದ್ದಾರೆ ಎಂದು ಹೇಳಿದರು.
ವಿವಿಧ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು. ಅಲ್ಲೂ ಕೂಡ ಸಿಎಂ ವಿಚಾರ ಪ್ರಸ್ತಾಪಿಸಿ ಪ್ರತಿಪಕ್ಷಗಳು ರಾಜೀನಾಮೆ ವಿಚಾರ ಬಗ್ಗೆ ಮಾತನಾಡುತ್ತಿವೆ. ಪ್ರಧಾನಿ ಮೋದಿ ಹರಿಯಾಣ ರಾಜ್ಯದಲ್ಲಿ ಚುನಾವಣಾ ಪ್ರಚಾರ ವೇಳೆ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಅದರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಆದ್ದರಿಂದ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಒಳಿತು ಎಂದು ಸಲಹೆ ನೀಡಿದರು.
೪೦ ವರ್ಷಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಕಪ್ಪುಚುಕ್ಕೆ ಇಲ್ಲದ್ದಂತೆ ಕಳಂಕರಹಿತರಾಗಿದ್ದಾರೆ. ಹೈಕಮಾಂಡ್ ಸೇರಿದಂತೆ ೧೩೬ ಶಾಸಕರ ಸಂಪೂರ್ಣ ಬೆಂಬಲವೂ ಇದೆ. ಅವರು ನಿರ್ದೋಷಿ ಎಂಬುದರಲ್ಲಿ ಎರಡು ಮಾತಿಲ್ಲ. ಜೆಡಿಎಸ್, ಬಿಜೆಪಿಯವರ ರಾಜಕೀಯ ಪಿತೂರಿಯಿಂದಾಗಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿಗಳಿಂದ ದೂರು ಕೊಡಿಸಿದ್ದಾರೆ. ವಿಚಾರಣೆ ನಡೆದ ಬಳಿಕ ಅವರು ನಿರ್ದೋಷಿಯಾಗಿ ಹೊರಬರುತ್ತಾರೆಂಬ ವಿಶ್ವಾಸ ತಮಗಿದೆ ಎಂದರು.