ಮೈಸೂರು: ಹೊಸ ವರ್ಷದಲ್ಲಿ ಎಲ್ಲಾ ಜನರು ಆರೋಗ್ಯವಂತರಾಗಿದ್ದು, ಭಾರತ ಕೊರೋನಾ ಮುಕ್ತ ದೇಶವಾಗಲಿ ಎಂದು ಮೈಸೂರು ಜಯದೇವ ಹೃದೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ ತಿಳಿಸಿದರು.
ಜಯದೇವ ಆಸ್ಪತ್ರೆಯಲ್ಲಿ ಹೊಸ ವರ್ಷದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮನಷ್ಯನಿಗೆ ಎಷ್ಟೇ ಹಣ ಅಂತಸ್ತು ಇದ್ದರೂ ಸಹ ಆರೋಗ್ಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆರೋಗ್ಯ ಚೆನ್ನಾಗಿದ್ದರೆ ಏನು ಬೇಕಾದರೂ ಮಾಡಬಹುದು, ಪ್ರತಿಯೊಬ್ಬರು ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡಬೇಕು. ೭ ಗಂಟೆ ನಿದ್ರೆ ಮಾಡಬೇಕು. ದುಶ್ಚಟಗಳಿಂದ ದೂರವಿದ್ದು ಸಾಮಾಜಿಕ ಜಾಲತಾಣವನ್ನು ಹಿತಮಿತವಾಗಿ ಬಳಸಬೇಕು. ಕೆಲಸದಲ್ಲಿ ಸಾಂಸಾರಿಕ ಜೀವನದಲ್ಲಿ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು.
ಗುಣಮಟ್ಟದ ಆಹಾರವನ್ನು ಸೇವಿಸಬೇಕು. ಜಂಕ್‌ಫುಡ್‌ಗಳನ್ನು ಸೇವಿಸಬಾರದು. ವರ್ಷಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದ ಅವರು ದೇಶದಲ್ಲಿ ಕೊರೋನಾ ಬರುವ ಲಕ್ಷಣಗಳಿದ್ದು ಸರ್ಕಾರ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಜನರು ಭಯ ಪಡುವ ಅಗತ್ಯವಿಲ, ಎಚ್ಚರಿಕೆಯಿಂದ ಇರಬೇಕು. ವಯಸ್ಸಾದವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು. ಈ ಸಂದರ್ಭದಲ್ಲಿ ಡಾ ಹೇಮಾ.ಎಸ್, ಡಾ. ವಿಶ್ವನಾಥ್, ಡಾ. ದೇವರಾಜ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್ ಯೋಗಾನಂದ್, ರಮೇಶ್ ಹಾಜರಿದ್ದರು.