ಹುಣಸೂರು : ಕನ್ನಡ ಕೇವಲ ಮಾತೃ ಭಾಷೆಯಾಗದೆ ಮನದ, ಮನೆಯ ಭಾಷೆಯಾಗಿ ಹೊರ ಹೊಮ್ಮಿದಾಗ ಮಾತ್ರ ಅಳಿಯದೆ, ಸಾವಿರಾರು ವರ್ಷ ಉಳಿಯಲು ಸಾಧ್ಯ ಎಂದು ರೋಟರಿ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್ ಮಕ್ಕಳಿಗೆ ಕಿವಿ ಮಾತು ಹೇಳಿದರು.
ನಗರದ ರೋಟರಿ ಭವನದಲ್ಲಿ ರೋಟರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ಉಳಿವಿಗೆ ರಾಷ್ಟ್ರ ಕವಿ ಆದಿಯಾಗಿ ಹಲವು ಮಹನೀಯರು ಕನ್ನಡದ ತೇರು ಎಳೆಯುವ ಮೂಲಕ ಕನ್ನಡದ ಅಸ್ಮಿತೆಯನ್ನು ವಿಶ್ವದೆತ್ತರಕ್ಕೆ ಮುಟ್ಟಿಸಿ ರಾಷ್ಟ್ರೀಯ ಸ್ಥಾನಮಾನ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡಕ್ಕೆ ಎಂಟು ಜ್ಞಾನ ಪೀಠ ಪ್ರಶಸ್ತಿ ಕಲ್ಪಿಸಿ ಸಾರ್ವಭೌಮತೆಯನ್ನು ಸಾರಿದ್ದಾರೆ ಎಂದರು.
ರೋಟರಿ ಕಾರ್ಯದರ್ಶಿ ಧರ್ಮಾಪುರ ಶ್ಯಾಮಣ್ಣ ಮಾತನಾಡಿ ಮಕ್ಕಳು ಇಂಗ್ಲಿಷ್ ಕಲಿಕೆಯ ಜೊತೆಗೆ ಕನ್ನಡವನ್ನು ಕಲಿತು, ಡ್ಯಾಡಿ, ಮಮ್ಮಿ ಸಂಸ್ಕೃತಿಗೆ ವಿದಾಯ ಹೇಳಿ ಅಮ್ಮ ,ಅಪ್ಪ ಪದಬಳಸಿ ಕನ್ನಡವನ್ನು ಹೆಚ್ಚು ಬಳಸಿ ಉಳಿಸೋಣವೆಂದರು.
ಕಾರ್ಯಕ್ರಮದಲ್ಲಿ ರೋಟರಿ ಸದಸ್ಯ ಚಿಲ್ಕುಂದ ಸಿ.ಎಸ್. ಮಹೇಶ್, ಕನ್ನಡ ಗೀತೆಗಳನ್ನು ಗಾಯನಮಾಡಿ ಮಕ್ಕಳನ್ನು ರಂಜಿಸಿದರು. ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹರೀಶ್, ಬಿ.ಎನ್, ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಲೋಕೇಶ್ ಹೆಚ್. ಎಂ. ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಮಮತ ಕೆ.ಬಿ.ನಾಜಿಯಾ,ಸಿಂಧು, ಶೃತಿ, ಎಲಿಜಬೆತ್ ಇದ್ದರು.



