ಚನ್ನಪಟ್ಟಣ: ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಸೋಮವಾರ ನಡೆದ ೨೪೯ ನೇ ದಿನದ ಹೋರಾಟದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯದಿಂದ ಹೊಸದಾಗಿ ಆಯ್ಕೆಯಾದ ೨೮ ಸಂಸದರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇವರು ಕಾವೇರಿ ನೀರು ಹಂಚಿಕೆ ವಿವಾದ ಹಾಗೂ ಮೇಕೆದಾಟು ಅಣೆ ಕಟ್ಟೆ ನಿರ್ಮಾಣದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕು ಕಕಜವೇದಿಕೆ ಮೂಲಕ ನಾಡು, ನುಡಿ ಹೋರಾಟಕ್ಕೆ ಬರುವವರಿಗೆ ರೇಷ್ಮೆನಾಡು ಕ್ರೀಡಾ ಮತ್ತು ಸಾಂಸ್ಕೃತಿಕ ಟ್ರಸ್ಟ್ ನೇತೃತ್ವದಲ್ಲಿ “ಹಸಿರಿದ್ದರೆ-ಉಸಿರು” ಎಂಬ ಘೋಷವಾಕ್ಯದ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜನಾಂದೋಲನದಡಿ ನಿತ್ಯ ೨೫ ಗಿಡ ವಿತರಣೆ ಮಾಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಆಂದೋಲನಕ್ಕೆ ಜ್ಞಾನ ಸರೋವರ ಕಾಲೇಜಿನ ವಿದ್ಯಾರ್ಥಿಗಳು ಬೆಂಬಲ ನೀಡಿದ್ದಾರೆ.
ಪರಿಸರದಲ್ಲಿ ಗಿಡಮರಗಳು ಹೆಚ್ಚಾದಷ್ಟು ಪ್ರಕೃತಿಯಲ್ಲಿ ಸಮತೋಲನ ಉಂಟಾಗುವ ಜೊತೆಗೆ ಬೇಸಿಗೆ ಕಾಲ, ಮಳೆಗಾಲ, ಚಳಿಗಾಲಗಳು ಋತುಮಾನಗಳಿಗೆ ಅನುಕೂಲವಾಗುವಂತೆ ಕಾಪಾಡುವ ಜೊತೆಗೆ ಮಳೆ, ಗಾಳಿ, ನೀರು, ಬೆಳೆ ಎಲ್ಲವೂ ಸರಿಯಾದ ಪ್ರಮಾಣದಲ್ಲಿ ಕಾಣುವಂತಾಗುತ್ತದೆ. ಆದರೆ ಆಧುನಿಕ ತಂತ್ರಜ್ಞಾನಕ್ಕೆ ಸಿಲುಕಿ ಮರಗಳ ಮಾರಣ ಹೋಮ ಮಾಡಿರುವ ಮನುಷ್ಯರ ದುರಾಸೆಯಿಂದ ಇಂದು ಪ್ರಕೃತಿಯಲ್ಲಿ ಸಮತೋಲನ ಇಲ್ಲದಂತಾಗಿ ಬಿಸಿಲಿನ ತಾಪ ಹೆಚ್ಚಾಗಿ ಮಳೆಗಾಲದಲ್ಲಿ ಮಳೆ ಆಗದೆ ನೀರಿನ ಅಭಾವ ಉಂಟಾಗುತ್ತಾ ಬಂದಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಪರಿಸರ ಸಂರಕ್ಷಣೆಗೆ ಮುಂದಾಗಲು ಪಣ ತೊಡಬೇಕಿದೆ ಎಂದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಚನ್ನಪಟ್ಟಣ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷರಾದ ನಿಂಗೇಗೌಡರು(ಎನ್‌ಜಿ) ಮಾತನಾಡಿ, ನಮ್ಮ ಪೂರ್ವಜನರು ಪ್ರಕೃತಿಗೆ ಪೂಜ್ಯನೀಯ ಸ್ಥಾನ ನೀಡುತ್ತಾ ಬಂದಿದ್ದರೂ. ಯಾವುದೇ ನ್ಯಾನ ಪಂಚಾಯ್ತಿ ಮಾಡಿದರೂ ಅರಳಿಕಟ್ಟೆಯ ಕೆಳಗೆ ಕೂತು ಮತದ ಮೇಲೆ ಪ್ರಮಾಣ ಮಾಡಿ ನ್ಯಾಯಕ್ಕೆ ಮುಕ್ತಿ ನೀಡುತ್ತಿದ್ದರು. ಅಲ್ಲದೆ ಮರಗಳನ್ನು ಸಾಕ್ಷಿಯಾಗಿಸಿ ಸಾಲ ನೀಡುತ್ತಿದ್ದರು. ಹೊರಗೆ ಹೋಗಬೇಕಾದರೆ ಮನೆಯ ಮುಂದಿನ ಮರಕ್ಕೆ ಕೈ ಮುಗಿದು ಹೋಗುವ ಸಂಸ್ಕಾರ ಇತ್ತ್ತು. ಜೊತೆಗೆ ಮಳೆ ಬಂದಾಗ ನೀರಿನ ಜೊತೆ ಮಣ್ಣಿನ ಫಲವತ್ತದೆ ಕೊಚ್ಚಿಹೋಗದಂತೆ ಕಾಪಾಡುವ ನಿಟ್ಟಿನಲ್ಲಿ ಹೊಲಗದ್ದೆಗಳಿಗೆ ತೆವರಿಗೆ (ಬದು) ಸುತ್ತಲೂ ಮರಗಳನ್ನು ಬೆಳೆಸುತ್ತಿದ್ದರು. ಆದರೆ ಇಂದು ಆಧುನಿಕತೆಯ ಸೋಗಿನಲ್ಲಿ ನಮ್ಮ ಪೂರ್ವಜರು ನೆಟ್ಟು ಬೆಳೆಸಿದ ಮರಗಳನ್ನು ಕಡಿದು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡಿ ಉತ್ತಮ ಗಾಳಿ ಇಲ್ಲದಂತೆ ಮಾಡಿದ್ದು, ಮಣ್ಣು ಪಲವತ್ತತೆಯನ್ನು ಕಳೆದುಕೊಳ್ಳುವಂತೆ ಮಾಡಿದ್ದೇವೆ. ನಮ್ಮ ಮಕ್ಕಳಿಗೆ ಶುದ್ಧ ಗಾಳಿ ಎಲ್ಲಿದೆ ಎಂದರೆ ಅದನ್ನು ಆಸ್ಪತ್ರೆಯಲ್ಲಿನ ಆಮ್ಲಜನಕವನ್ನು ಉದಾಹರಣೆ ಕೊಟ್ಟು ಹೇಳುವಂತಾಗಿದೆ. ಈ ನಿಟ್ಟಿನಲ್ಲಿ ನಾವು ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರ ಸಂರಕ್ಷಣೆಯ ಬಗ್ಗೆ ಸಹ ಅರಿವು ಮೂಡಿಸುವ ಜವಾಬ್ದಾರಿ ಇದೆ ಎಂದರು.

ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಜನರಿಗೆ ಸಸಿ ವಿತರಣೆ ಮಾಡಿದರು. ಸಂದರ್ಭದಲ್ಲಿ ಜಗದಾಪುರ ಕೃಷ್ಣೇಗೌಡ, ನಿವೃತ್ತ ಶಿಕ್ಷಕ ಪುಟ್ಟಪ್ಪಾಜಿ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಚಿಕ್ಕಣ್ಣಪ್ಪ, ಸಂಕಲಗೆರೆ ಹುಚ್ಚಪ್ಪ, ಚಿಕ್ಕೇನಹಳ್ಳೀ ಸಿದ್ದಪ್ಪಾಜಿ, ಜ್ಞಾನ ಸರೋವರ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ, ಕಾರ್ಯದರ್ಶಿ ಆದರ್ಶ ಕುಮಾರ್ ಆರ್, ಉಪನ್ಯಾಸಕರುಗಳಾದ ಹೊಲಸಾಲಯ್ಯ, ಪ್ರವೀಣ್, ಝಾಕಿರ್ ಹುಸೇನ್, ವಿನಯ್ ಕುಮಾರ್, ಶೃತಿ, ಭಾವನ, ಚಂದನ, ರೂಪ, ಸುಂದ್ರಮ್ಮ ಇನ್ನೂ ಅನೇಕರು ಹಾಜರಿದ್ದರು.