Saturday, April 19, 2025
Google search engine

Homeಸ್ಥಳೀಯಬಿಜೆಪಿಯವರು ಅಕ್ಕಿ ಕೊಡುವಂತೆ ಒತ್ತಾಯಿಸಲಿ

ಬಿಜೆಪಿಯವರು ಅಕ್ಕಿ ಕೊಡುವಂತೆ ಒತ್ತಾಯಿಸಲಿ


ಮೈಸೂರು: ರಾಜ್ಯದ ಜನತೆಗೆ ಅಕ್ಕಿ ಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸದ ಬಿಜೆಪಿಯ ೬೬ ಶಾಸಕರು ಮತ್ತು ೨೬ ಸಂಸದರು ನಾಡದ್ರೋಹಿಗಳು ಎಂದು ಕೆಪಿಸಿಸಿ ವಕ್ತಾರ ಎ.ಎನ್.ನಟರಾಜ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರ ಪ್ರತಿಭಟನೆ ಯಾರ ವಿರುದ್ಧ? ರಾಜ್ಯಕ್ಕೆ ಅನ್ಯಾಯ ಮಾಡದಿರುವಂತೆ ಧ್ವನಿ ಎತ್ತದ ಬಿಜೆಪಿ ನಾಯಕರಿಗೆ ಜನತೆಯ ಹಿತ ಮುಖ್ಯವಲ್ಲ. ಇದು ನಾಚಿಕೆಗೇಡು ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರಕ್ಕಲ್ಲ. ಕರ್ನಾಟಕ ಸರ್ಕಾರಕ್ಕೆ ಕೊಡುವಂತೆ ಒತ್ತಾಯಿಸಬೇಕಿತ್ತು. ಸರ್ವ ಪಕ್ಷ ನಿಯೋಗ ಕರೆದೊಯ್ಯುವಂತೆ ಸಲಹೆ ಕೊಡಬೇಕಿತ್ತು. ಈಗ ಅವರೇ ಪ್ರತಿಭಟನೆಗೆ ಮುಂದಾಗಿರುವುದು ಮಾನಮರ್ಯಾದೆ ತ್ಯಾಗ ಮಾಡಿರುವುದರ ಸಂಕೇತ ಎಂದರು.
ದೇಶದ ಗೋದಾಮುಗಳಲ್ಲಿ ೭೩೧ ಲಕ್ಷ ಮೆಟ್ರಿಕ್ ಟನ್ ಅಕ್ಕಿ, ಗೋಧಿ ದಾಸ್ತಾನಿದೆ. ಒಂದು ವರ್ಷಕ್ಕೆ ಇಡೀ ದೇಶಕ್ಕೆ ೫೫೦ ಲಕ್ಷ ಮೆಟ್ರಿಕ್ ಟನ್ ದವಸ ಅಗತ್ಯವಿದೆ. ೧೮೦ ಲಕ್ಷ ಮೆಟ್ರಿಕ್ ಟನ್ ದವಸ ಧಾನ್ಯ ಹೆಚ್ಚುವರಿ ದಾಸ್ತಾನಿದೆ. ೭೦ ದೇಶಗಳಿಗೆ ಅಕ್ಕಿ ಕೊಡಲಾಗುತ್ತಿದೆ. ೨೯ ಲಕ್ಷ ಮೆಟ್ರಿಕ್ ಟನ್ ಅಕ್ಕಿ ಎಥೆನಾಲ್‌ಗೆ ನೀಡಲಾಗಿದೆ ಎಂದು ವಿವರಿಸಿದರು.
ಅಕ್ಕಿ ಇದ್ದು ಕೊಡದ ಕೇಂದ್ರ ಸರ್ಕಾರ ಕಾಂಗ್ರೆಸ್ ಗ್ಯಾರಂಟಿಗಳನ್ನು ವಿಫಲಗೊಳಿಸುವ ಸಂಚು ನಡೆಸಿದೆ. ಆದರೆ, ಕಾಂಗ್ರೆಸ್ ಗ್ಯಾರಂಟಿಗಳನ್ನು ಇತರೆ ರಾಜ್ಯಗಳು ವಿಸ್ತರಿಸಲಿವೆ. ಬಿಜೆಪಿಗೆ ತಕ್ಕ ಪಾಠ ಕಲಿಸಲಿವೆ ಎಂದು ನುಡಿದರು.
ಅಕ್ಕಿ ಸಿಗದ ಹಿನ್ನೆಲೆಯಲ್ಲಿ ೪.೪೨ ಕೋಟಿ ಜನರಿಗೆ ೫ ಕೆಜಿ ಅಕ್ಕಿ, ಇನ್ನೈದು ಕೆಜಿ ಅಕ್ಕಿಗೆ ೩೪ ರೂ.ಗಳಂತೆ ನೀಡಲು ಸರ್ಕಾರ ಮುಂದಾಗಿರುವುದು ಅಭೂತಪೂರ್ವ ಸಂಗತಿ ಮತ್ತು ದೇಶದ ಯಾವ ರಾಜ್ಯವೂ ಜಾರಿಗೆ ತರದ ಕ್ರಾಂತಿಕಾರಕ ಕಾರ್ಯಕ್ರಮ ಎಂದು ಹೇಳಿದರು.
ಆಂತರಿಕ ಪ್ರಜಾಪ್ರಭುತ್ವವಿಲ್ಲ: ಯಾವ ಬಣ ಹೆಚ್ಚು ಪ್ರತಿಭಟನೆ ಮಾಡುತ್ತದೆ ಎಂಬುದರ ಆಧಾರದ ಮೇಲೆ ವಿಪಕ್ಷ ಮತ್ತು ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ ಎಂಬಂತೆ ಬಿಜೆಪಿ ನಾಯಕರು ಬಣಗಳಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಕಸರತ್ತು ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬುದನ್ನು ಸೂಚಿಸುತ್ತದೆ. ಶಾಸಕಾಂಗ ಪಕ್ಷದ ಸಭೆ ನಡೆಸಿ ಆಯ್ಕೆ ಮಾಡುವ ಪದ್ಧತಿ ಇಲ್ಲ. ನಾಗ್ಪುರದ ಕೇಶವಾಕೃಪ ಆದೇಶದ ಮೇರೆಗೆ ಆಯ್ಕೆ ನಡೆಯುತ್ತಿದೆ. ಬಿಜೆಪಿಯ ಬಣ್ಣ ಕಳಚಿದೆ. ಅದರ ಬಣ್ಣ ಕೇಸರಿ ಅಲ್ಲ. ಕಪ್ಪು ಎಂದು ಟೀಕಾಪ್ರಹಾರ ನಡೆಸಿದರು. ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಕೆಲಸ ಮಾಡುವುದಿಲ್ಲ. ಕೆಲಸ ಮಾಡುವವರನ್ನು ಸಹಿಸುವುದಿಲ್ಲ. ೨೦೨೪ರ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರವನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ರಾಜ್ಯದಲ್ಲಿ ೨೫ ಸೀಟುಗಳು ಕಾಂಗ್ರೆಸ್ ಗೆಲ್ಲಲಿರುವುದು ಜನರ ಭಾವನೆಯಿಂದಲೇ ತಿಳಿಯುತ್ತಿದೆ ಎಂದು ಹೇಳಿದರು. ಬಿಜೆಪಿ ನಾಯಕರಿಗೆ ಬಡವರ ಮೇಲೆ ಅಸಹನೆ ಇದೆ. ಅಭಿವೃದ್ಧಿಯಾಗುವುದು ಬೇಕಿಲ್ಲ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟವಾಗಿರಬಾರದು. ಸಾಮರಸ್ಯ, ಸಹಬಾಳ್ವೆಯಿಂದ ಇರುವುದು ಬೇಕಿರಲಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಬಡವರ ಕಣ್ಣೀರು ಒರೆಸುವ ಕಾರ್ಯಕ್ರಮಗಳಾಗಿವೆ ಎಂದರು.
೨೦೦ ಯೂನಿಟ್ ಉಚಿತ ವಿದ್ಯುತ್ ವಿದ್ಯುತ್ ಪೂರೈಕೆಯ ಗೃಹಜ್ಯೋತಿ ಯೋಜನೆಗೆ ೧ ಕೋಟಿ ಜನರು ಅರ್ಜಿ ಸಲ್ಲಿಸಿದ್ದಾರೆ. ಇದು ಕತ್ತಲಿನಿಂದ ಬೆಳಕಿನೆಡೆಗಿನ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಧ್ಯಮ ವಕ್ತಾರ ಕೆ.ಮಹೇಶ್, ಈಶ್ವರ್ ಚಕ್ಕಡಿ ಮುಂತಾದವರಿದ್ದರು.

RELATED ARTICLES
- Advertisment -
Google search engine

Most Popular