ಮೈಸೂರು: ವಿದೇಶಗಳಲ್ಲಿ ಸಮ್ಮೇಳನ ಮಾಡುವವರು ಮಕ್ಕಳಿಗೆ ಕನ್ನಡವನ್ನೇ ಕಲಿಸುತ್ತಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಿಷಾದಿಸಿದರು.
ಉತ್ತಿಷ್ಠ ಭಾರತ ಪ್ರತಿಷ್ಠಾನ, ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ ವತಿಯಿಂದ ನಿಮಿಷಾಂಬ ನಗರ ಹಿರಿಯರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶಗಳಲ್ಲಿ ಕನ್ನಡ ಸಮ್ಮೇಳನಗಳನ್ನು ಸ್ವಾರ್ಥಕ್ಕೆ ಮಾಡಬಾರದು. ಮೊದಲು ಅವರವರ ಮನೆಯ ಮಕ್ಕಳಿಗೆ ಕನ್ನಡ ಕಲಿಸಬೇಕು. ಆಗ ಸಮ್ಮೇಳನ ಮಾಡುವುದಕ್ಕೆ ಸಾರ್ಥಕವಾಗುತ್ತದೆ ಎಂದರು.
ಇಂಗ್ಲಿಷ್ ಅನ್ನು ಮಾಧ್ಯಮವನ್ನಾಗಿ ಕಲಿಸುವ ಬದಲು ಒಂದು ಭಾಷೆಯಾಗಿ ಕಲಿಸಬೇಕು. ಪ್ರತಿಯೊಬ್ಬರಿಗೂ ಇಂಗ್ಲಿಷ್ ಅಗತ್ಯವಿದೆ ಎಂದರು.
ಹಿರಿಯ ಕವಯತ್ರಿ ಎ. ಪುಷ್ಪಾ ಅಯ್ಯಂಗಾರ್ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಾತಿನ ಶೈಲಿ ಹಿತವಾಗಿದ್ದರೆ ಅದುವೇ ಸಾಹಿತ್ಯ ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕವಯತ್ರಿ ಡಾ.ಕೆ. ಲೀಲಾಪ್ರಕಾಶ್ ಮಾತನಾಡಿದರು.
ಕೆ.ವಿ. ವಾಸು, ಪ್ರೊ.ಆರ್.ಎ. ಕುಮಾರ್, ಜಿ.ಕೆ. ಕುಲಕರ್ಣಿ, ದಾಕ್ಷಾಯಣಿ, ನಾಗಮ್ಮ, ರಾಜಗೋಪಾಲಚಾರಿ, ಎನ್.ಕೆ. ಚನ್ನಪ್ಪ,
ಡಾ.ಕೆ. ಲೀಲಾಪ್ರಕಾಶ್, ಎನ್. ಅನಂತ, ಅಲಮೇಲಮ್ಮ ಕವನ ವಾಚಿಸಿದರು. ಸ್ವಾತಂತ್ರ್ಯೋತ್ಸವ, ಮಧುಮೇಹ, ದೇಶಪ್ರೇಮ, ಶರಶಯ್ಯೆಯಲ್ಲಿ ಭೀಷ್ಮ. ಪುನೀತ್‌ರಾಜ್‌ಕುಮಾರ್ ಕುರಿತು ಕವನಗಳಿದ್ದವು.
ಮಹದೇವಶೆಟ್ಟಿ ಭಕ್ತಿಗೀತೆ, ಪಾರ್ವತಮ್ಮ ದೇಶಭಕ್ತಿಗೀತೆ, ಕೆ.ವಿ. ವಾಸು, ನಾಗಮ್ಮ ಪ್ರಾರ್ಥನಾ ಗೀತೆ ಹಾಡಿದರು. ಸ್ವಾತಂತ್ರ್ಯೋತ್ಸವ ಮಹತ್ವ ಕುರಿತು ಬಾಪು ರಾಮಕೃಷ್ಣ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ ಎನ್. ಶ್ರೀಧರ್ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು. ಉತ್ತಿಷ್ಠ ಭಾರತ ಪ್ರತಿಷ್ಠಾನ ಸಂಚಾಲಕ ಎಂ.ವಿ. ನಾಗೇಂದ್ರ ಬಾಬು ಇದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಎನ್. ಅನಂತ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಹಿರಿಯರ ಹಗಲು ಯೋಗ ಕ್ಷೇಮ ಕೇಂದ್ರದ ಸಂಸ್ಥಾಪಕ ಎಂ.ಪಿ. ಪ್ರಭುಸ್ವಾಮಿ ವಂದಿಸಿದರು. ವೈದೇಹಿ, ಮುತ್ತುಸ್ವಾಮಿ, ನಾಗರಾಜು ಮೊದಲಾದವರು ಪಾಲ್ಗೊಂಡಿದ್ದರು.