ಮಂಡ್ಯ: ಮಂಡ್ಯದಲ್ಲಿ ಭ್ರೂಣಲಿಂಗ ಪತ್ತೆ-ಹತ್ಯೆ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆದಿದೆ.
ಪ್ರಕರಣದ ಸಂಬಂಧ ಇಲ್ಲಿಯವರೆಗೆ ಈ ಸಂಬಂಧ ಕಲೆ ಹಾಕಿರುವ ಮಾಹಿತಿ ಚಲುವರಾಯಸ್ವಾಮಿ ಪಡೆದುಕೊಳ್ಳುತ್ತಿದ್ದಾರೆ.
ಸಭೆಯಲ್ಲಿ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧುಮಾದೇಗೌಡ, ಎಡಿಸಿ, ಜಿಪಂ ಸಿಇಓ, ಎಸ್ಪಿ, ಡಿಹೆಚ್ ಓ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ.
ಅಧಿಕಾರಿಗಳ ಸಭೆಯ ನಂತರ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಈ ಪ್ರಕರಣವನ್ನು ಬೈಯಪ್ಪನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಮಂಡ್ಯಗೆ ಸೀಮಿತವಾದ ಕೇಸ್ ಅಲ್ಲ. ಮಂಡ್ಯ ಸೇರಿದಂತೆ ಸುತ್ತಮುತ್ತಲ ಐದಾರು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಇವರು ಯಾವುದೇ ಒಂದು ಸ್ಥಳವನ್ನ ನಿಗಧಿಪಡಿಸಿಕೊಂಡಿಲ್ಲ. ಬೇರೆ ಬೇರೆ ಸ್ಥಳಗಳನ್ನ ನಿಗಧಿಪಡಿಸಿಕೊಂಡು ಭ್ರೂಣಪತ್ತೆ ಮಾಡ್ತಿದ್ರು. ಪ್ರಕರಣ ಈಗ ತನಿಖೆಯ ಹಂತದಲ್ಲಿದೆ. ಆರೋಪಿಗಳು, ಬನ್ನೂರು, ಮಂಡ್ಯ ದಾವಣಗೆರೆಯವರಾಗಿದ್ದು. ಮೈಸೂರಿನ ಮಾತಾ ಆಸ್ಪತ್ರೆಯ ಕೆಲವು ಸಿಬ್ಬಂದಿಗಳು ಸೇರಿದ್ದರು ಎಂದು ಮಾಹಿತಿ ನೀಡಿದರು.
ಹುಳ್ಳೇನಹಳ್ಳಿ ಆಲೆ ಮನೆಯಲ್ಲಿ ಸ್ಜ್ಯಾನಿಂಗ್ ಮಾಡ್ತಿದ್ರು ಎಂಬ ಮಾಹಿತಿ ಇದ್ರು. ಆಲೆ ಮನೆಯಲ್ಲಿ ಯಾವುದೇ ಕುರುಹು ಪತ್ತೆಯಾಗಿಲ್ಲ. ತಹಶೀಲ್ದಾರ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಪೊಲೀಸರನ್ನೊಳಗೊಂಡ ಒಂದು ತಂಡ ರಚನೆ ಮಾಡಲಾಗುವುದು. ಪಂಚಾಯತಿ ಮಟ್ಟದಲ್ಲೂ 7 ಜನರನ್ನೊಳಗೊಂಡ ಒಂದು ತಂಡ ರಚನೆ ಮಾಡಲಾಗುವುದು. ಮುಂದಿನ 15 ದಿನಗಳಲ್ಲಿ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ನಕಲಿ ವೈದ್ಯರು ನಡೆಸುತ್ತಿರೊ ಕ್ಲಿನಿಕ್ ಗಳ ಪತ್ತೆಗೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಂಡ್ಯದಲ್ಲಿ ಸ್ಕ್ಯಾನಿಂಗ್ ಮಾಡೋದು, ವೈದ್ಯರ ಪಾಲ್ಗೊಳ್ಳುವಿಕೆ ಬಗೆಗೆ ಸದ್ಯಕ್ಕೆ ಮಾಹಿತಿ ಇಲ್ಲ. ಆದ್ರೆ ಒಂದೆರಡು ಅನುಮಾನಗಳಿವೆ. ಸಿಎಂ ಸಹ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಮತ್ತೆ ವ್ಯತ್ಯಾಸ ಆಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹುಳ್ಳೇನಹಳ್ಳಿ ಆಲೆ ಮನೆಯಲ್ಲಿ ಇದು ಯಾವಾಗಿಂದ ನಡೆಯುತ್ತಿತ್ತು.? ಎಷ್ಟು ಪ್ರಕರಣಗಳನ್ನ ಪತ್ತೆ ಮಾಡಲಾಗಿದೆ ಎಂಬ ಬಗೆಗೆ ನಿಖರವಾಗಿ ಮಾಹಿತಿ ಇಲ್ಲ. ಬೈಯಪ್ಪನ ಹಳ್ಳಿ ಪೊಲೀಸರು ಬಂಧಿತರಿಂದಲೇ ಬಾಯಿಬಿಡಿಸಿಬೇಕಿದೆ. ಆರೋಪಿಗಳನ್ನ ನಮ್ಮ ಜಿಲ್ಲೆಯ ಪೊಲೀಸರ ವಶಕ್ಕೆ ನೀಡಲು ಅವಕಾಶ ಇದ್ದು, ಅವರ ವಿಚಾರಣೆ ಮಾಡಿದ್ರೆ ನಿಖರ ಮಾಹಿತಿ ಸಿಗಬಹುದು ಎಂದು ಹೇಳಿದರು.
ಬೈಯಪ್ಪನ ಹಳ್ಳಿ ಪೊಲೀಸರು ತನಿಖೆ ಮಾಡಿದ್ರೆ ನಮ್ಮ ಜಿಲ್ಲೆಗೆ ಏನ್ ಮಾಹಿತಿ ಇರುತ್ತೆ. ಹಾಗಾಗಿಯೇ ನಾಲ್ಕೈದು ಜಿಲ್ಲೆ ಪೊಲೀಸರು ಒಟ್ಟಿಗೆ ತನಿಖೆ ಮಾಡಿದರೆ ಅಥವಾ ಸಿಐಡಿ ತನಿಖೆಗೆ ನೀಡಿದ್ರೆ ಪ್ರಕರಣ ನಿಖರತೆ ತಿಳಿಯಲಿದೆ. ಸತ್ಯಾ ಸತ್ಯತೆ ಪತ್ತೆ ಹಚ್ಚಲು ಭ್ರೂಣ ಪತ್ತೆ ಹತ್ಯೆ ಪ್ರಕರಣವನ್ನ ಸರ್ಕಾರ ಸಿಐಡಿ ತನಿಖೆಗೆ ವಹಿಸಲಿ ಅನ್ನೋದು ನನ್ನವೈಯಕ್ತಿಕ ಅಭಿಪ್ರಾಯ. ಈ ಸಂಬಂಧ ಸಿಎಂ ಜೊತೆ ಮಾತಾಡಲಾಗುವುದು ಎಂದರು.
ಪ್ರಕರಣ ಸಂಬಂಧ ಒಂದು ದೊಡ್ಡ ಜಾಲವೇ ಇದೆ. ಹಾಗಾಗಿಯೇ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು. ಈ ಜಾಲ ಹರಡದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಆಶಾ ಕಾರ್ಯಕರ್ತರಿಗೆ ಬೆದರಿಕೆ ಆರೋಪ ವಿಚಾರವಾಗಿ ಮಾತನಾಡಿ, ಎಲ್ಲವನ್ನ ಒಳಗೊಂಡಂತೆ ತನಿಖೆ ನಡೆಸಲಾಗುವುದು. ಮಂಡ್ಯದ ಯಾವ ಮಹಿಳೆಯರೂ ಭ್ರೂಣಹತ್ಯೆಯಲ್ಲಿ ಭಾಗಿಯಾಗಿಲ್ಲ. ಬೆಂಗಳೂರು ಸೇರಿದಂತೆ ಹಲವು ಕಡೆ ಮಹಿಳೆಯರು ಪಾಲ್ಗೊಂಡಿರುವ ಸಾಧ್ಯತೆ ಇದೆ. ಆದರೆ ತನಿಖೆ ಪೂರ್ಣಗೊಂಡ ನಂತರ ಬೆಂಗಳೂರು, ಮಂಡ್ಯ ಸೇರಿದಂತೆ ಯಾವ ಜಿಲ್ಲೆಯ ಎಷ್ಟು ಮಹಿಳೆಯರು ಭಾಗಿಯಾಗಿದ್ದಾರೆ ಎಂಬುದು ತಿಳಿಯಲಿದೆ ಎಂದು ಚೆಲುವರಾಯಸ್ವಾಮಿ ಮಾಹಿತಿ ನೀಡಿದರು.