ಮಂಗಳೂರು (ದಕ್ಷಿಣ ಕನ್ನಡ):ರಾಜ್ಯ ಸರಕಾರ ತಂತ್ರಜ್ಞಾನ ಬಳಸಿಕೊಂಡು ಹಿಂದಿನ ಗಣತಿಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲಿ ಎಂದು ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ದ.ಕ. ಜಿಲ್ಲಾ ಘಟಕ ಒತ್ತಾಯಿಸಿದೆ.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಬಗ್ಗೆ ಮಾತನಾಡಿದ ಅಖಿಲ ಭಾರತ ವೀರಶೈವ- ಲಿಂಗಾಯತ 24ನೇ ಅಧಿವೇಶನದ ದ.ಕ. ಜಿಲ್ಲಾ ಉಸ್ತುವಾರಿ ಉಮೇಶ್ ಪಾಟೀಲ್, ಸುಮಾರು 8 ವರ್ಷಗಳಷ್ಟು ಹಳೆಯದಾದ ಹಾಗೂ ಅನೇಕ ಲೋಪದೋಷಗಳಿಂದ ಕೂಡಿರುವ ಹಾಗೂ ಬಿಡುಗಡೆಗೆ ಮುನ್ನವೇ ಬಹಿರಂಗಗೊಂಡಿರುವ ಕಾಂತರಾಜು ಆಯೋಗದ ವರದಿಯನ್ನು ತಿರಸ್ಕರಿಸುವುದು ಹಾಗೂ ಈ ವರದಿಯನ್ನು ರಾಜ್ಯ ಸರಕಾರ ಸ್ವೀಕರಿಸದಂತೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು.
ಡಿ.23 ಮತ್ತು 24ರಂದು ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿ ಮಹಾಸಭೆಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಅಧಿವೇಶನ ನಡೆಯಲಿದೆ. ಎರಡು ದಿನಗಳ ಸಮಾವೇಶದಲ್ಲಿ ವಿವಿಧ ಗೋಷ್ಠಿಗಳು, ವಸ್ತು ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನವೂ ಇರಲಿದೆ. ಅಧಿವೇಶನದಲ್ಲಿ ವೀರಶೈವ- ಲಿಂಗಾಯ ಸಮುದಾಯವನ್ನು ಕೇಂದ್ರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.