Friday, April 11, 2025
Google search engine

Homeರಾಜ್ಯಜನ ವಿರೋಧ ವ್ಯಕ್ತಪಡಿಸಲಿ, ವಿಪಕ್ಷಗಳು ಟೀಕಿಸಲಿ, ನೀರಿನ ದರ ಹೆಚ್ಚಳ ಮಾಡುತ್ತೇವೆ: ಡಿಸಿಎಂ ಡಿಕೆ...

ಜನ ವಿರೋಧ ವ್ಯಕ್ತಪಡಿಸಲಿ, ವಿಪಕ್ಷಗಳು ಟೀಕಿಸಲಿ, ನೀರಿನ ದರ ಹೆಚ್ಚಳ ಮಾಡುತ್ತೇವೆ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಮಾಧ್ಯಮದವರು ಬೈಯಲಿ, ಜನ ವಿರೋಧ ವ್ಯಕ್ತಪಡಿಸಲಿ, ವಿಪಕ್ಷಗಳು ಟೀಕಿಸಲಿ, ತಲೆಕೆಡಿಸಿಕೊಳ್ಳುವುದಿಲ್ಲ, ನೀರಿನ ದರ ಹೆಚ್ಚಳ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಖಡಕ್ ಆಗಿಯೇ ಹೇಳಿದ್ದಾರೆ.

ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಗುರುವಾರ ನಡೆದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜನ ಬೈದರೂ ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇನೆ ಎಂದರು.

ಈ ವೇಳೆ ನೀರು ಮತ್ತು ಪವರ್ ಈ ಎರಡು ಪ್ರಮುಖವಾಗಿದ್ದು, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ನೀರು ಸರಬರಾಜು ಖಾಸಗೀಕರಣ ಚರ್ಚೆ ನಡೆದಿತ್ತು. ನಮ್ಮ ರಾಜ್ಯದಲ್ಲಿ ಇದು ಕಷ್ಟವಾಗಲಿದೆ ಎಂದು ಮಾಹಿತಿ ನೀಡಿದ್ದೆ. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ನಂತರ ಯೋಜನೆ ಕೈ ಬಿಟ್ಟಿದ್ದೆವು. ಈಗ ನಾನು ಸಚಿವನಾದ ಮೇಲೆ ಮತ್ತೆ ಕೆಲವರು ಖಾಸಗೀಕರಣದ ಬಗ್ಗೆ ಬಂದು ಮಾತಾಡಿದ್ದರು. ನಾನು ಇದು ಆಗಲ್ಲ ಎಂದು ಹೇಳಿದ್ದೇನೆ ಎಂದಿದ್ದಾರೆ.

ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀ ವ್ಯಾಪ್ತಿಯಲ್ಲಿ ಯಾರು ಬೋರ್ ವೆಲ್ ಹಾಕುವಂತಿಲ್ಲ. ಯಾರು ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ಇದಕ್ಕೆ ರಾಜ್ಯಪಾಲರು ಸಹಿ ಹಾಕಿದ್ದಾರೆ. ಹೊಸ ಕಾನೂನು ಬಂದಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ನೀರಿನ ದರದ ಬಗ್ಗೆ ಮಾಹಿತಿ ಕೊಡಿ. ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಿಸಿಲ್ಲ ಎಂದು ಮಾಹಿತಿ ಕೊಡಿ ಎಂಬುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ವೇದಿಕೆ ಮೇಲೆಯೇ ಅಧಿಕಾರಿಗಳಿಗೆ ಸೂಚಿಸಿದರು.

ನಾಗರಿಕರಿಗೆ ಉಪಕಾರ ಸ್ಮರಣೆ ಇಲ್ಲ: ಡಿಕೆಶಿ

ನಾಗರಿಕರಿಗೆ ಎಷ್ಟೇ ಮಾಡಿದರೂ ಉಪಕಾರ ಸ್ಮರಣೆ ಇಲ್ಲ. ಎಷ್ಟೇ ಒಳ್ಳೆಯದು ಮಾಡಿದರೂ ಬೈತಾರೆ, ಕಮೆಂಟ್​ ಮಾಡುತ್ತಾರೆ. ಬಿಲ್ ಪಾವತಿಸುವರು ಪಾವತಿ ಮಾಡುತ್ತಾರೆ. ಕೆಲವರು ಪಾವತಿ ಮಾಡಲ್ಲ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಳೆ ಕೊಯ್ಲು ಜಾಗೃತಿ ಅಭಿಯಾನ, ವರುಣಮಿತ್ರ ತರಬೇತಿ ಹಾಗೂ ಯುನೈಟೆಡ್ ನೇಷನ್ ಇನೋವೇಷನ್ ಪ್ರಾಜೆಕ್ಟ್ ಫಾರ್ ವಾಟರ್ ಸೆಕ್ಯುರಿಟಿ ಇನ್ ಬೆಂಗಳೂರು ಸಿಟಿ ಯೋಜನೆಗೆ ಅವರು ಚಾಲನೆ ನೀಡಿದರು.

110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಯೋಜನೆ ಅಡಿ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಟಿ.ದಾಸರಹಳ್ಳಿ, ಬ್ಯಾಟರಾಯನಪುರ ಹಾಗೂ ಮಹದೇವಪುರ ವಿಧಾನಸಭೆಗೆ ಸೇರಿರುವ ಹಳ್ಳಿಗಳಿಗೆ ಕಾವೇರಿ ನೀರನ್ನು ನೀಡಲಾಗುತ್ತದೆ.

RELATED ARTICLES
- Advertisment -
Google search engine

Most Popular