ಪಿರಿಯಾಪಟ್ಟಣ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿ ನಿವೃತ್ತಿಯಾಗುವ ಶಿಕ್ಷಕರು ತಮ್ಮ ನಿವೃತ್ತಿ ಜೀವನವನ್ನು ಸಮಾಜಮುಖೀ ಚಿಂತನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಿಆರ್ಪಿ ಗಣೇಶ್ ಕುಮಾರ್ ತಿಳಿಸಿದರು.
ತಾಲೂಕಿನ ಪಂಚವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಮಹತ್ವವಾದುದು. ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಮಕ್ಕಳಿಗೆ ಭವಿಷ್ಯ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದೆ ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಮರೆತು ತಪ್ಪು ಮಾಡಿದರೆ ಮಕ್ಕಳು ತಪ್ಪುದಾರಿ ತುಳಿಯುತ್ತಾರೆ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ, ತಾಲೂಕಿನ ತಾತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಶ್ರೀಯುತ ರಾಜಕುಮಾರ್ ಸರ್ ರವರು ಅತ್ಯಂತ ಶಿಸ್ತಿನ ಶಿಕ್ಷಕರು, ರಾಜಕುಮಾರ್ ಸರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ ಗ್ರಾಮಗಳಲ್ಲು ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು.
ತಮ್ಮ ಬೋಧನಾ ಕೌಶಲ್ಯದಿಂದ ಶಿಕ್ಷಣ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಇವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ರಾಜಕುಮಾರ್, ಮಕ್ಕಳೊಂದಿಗೆ ಕಳೆದ ದಿನಗಳು, ಅವರನ್ನು ಶೈಕ್ಷಣಿಕವಾಗಿ ಸಾಮಾಜಿಕವಾಗಿ ತಿದ್ದಿ ಬೆಳೆಸಿದ ಸಾರ್ಥಕ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ತಮ್ಮ ಸೇವೆಯ ದಿನಗಳನ್ನು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ.ಕೆ.ಸುರೇಶ್, ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ, ಬಡ್ತಿ ಮುಖ್ಯ ಶಿಕ್ಷಕರಾದ ಎಂ.ಗಣೇಶ್, ವಿ.ಪದ್ಮಿನಿ, ಶಿಕ್ಷಕರಾದ ಟಿ.ಆರ್.ವಿನೋದ್ ಕುಮಾರ್, ಮೋಹನಕುಮಾರಿ, ಕೈಲಾಸಪತಿ, ಮನುಕುಮಾರ್, ಪದ್ಮಾವತಿ, ರೇಖಾ, ಹೇಮಾವತಿ, ವಿ.ಎಸ್.ನಟೇಶ್, ಸೋಮಣ್ಣ, ತ್ರಿವೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.