Saturday, September 6, 2025
Google search engine

Homeಸ್ಥಳೀಯಮಾಧ್ಯಮಗಳಲ್ಲಿ ನೈತಿಕತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಲಿ : ಶ್ರೀಶ್ರೀಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳು

ಮಾಧ್ಯಮಗಳಲ್ಲಿ ನೈತಿಕತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಲಿ : ಶ್ರೀಶ್ರೀಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳು

  • ʼರಾಜ್ಯಧರ್ಮʼ ವಾಹಿನಿ ಮತ್ತು ʼಮೈಸೂರು ವಿಜಯʼ ದಿನಪತ್ರಿಕೆ ಕಛೇರಿ ಉದ್ಘಾಟನೆ

ಮೈಸೂರು  : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂತನವಾಗಿ ಆರಂಭವಾಗಿರುವ ʼರಾಜ್ಯಧರ್ಮʼ ಸುದ್ದಿವಾಹಿನಿ ಮತ್ತು ʼಮೈಸೂರು ವಿಜಯʼ ದಿನಪತ್ರಿಕೆ ಕಛೇರಿಯನ್ನು ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಪೀಠಾಧಿಪತಿ  ಶ್ರೀಶ್ರೀಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳು ಹಾಗೂ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿಗಳು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.‌

ಚಾಮುಂಡಿಪುರಂ ಸರ್ಕಲ್‌  ಬಳಿ ಇರುವ  ಆರ್. ಆರ್‌ .ಕಾಂಪ್ಲೆಕ್ಸ್‌ ನಲ್ಲಿ ʼರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆ ಕಛೇರಿʼಗೆ ಶುಕ್ರವಾರ ಅಧಿಕೃತ ಚಾಲನೆ ದೊರಕಿತು. ಚಂದ್ರವನ ಆಶ್ರಮದ ಪೀಠಾಧಿಪತಿ  ಶ್ರೀಶ್ರೀಶ್ರೀ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳು ಶುಭ ಹಾರೈಸಿ ಕನಸನ್ನು ನನಸು ಮಾಡಿಕೊಳ್ಳುವುದು ತುಂಬಾ ಕಷ್ಟ. ಆದರೆ ಕಿರಣ್‌ ಕುಮಾರ್‌ ಅವರು ಈ ಸಾಹಸವನ್ನು ಬಹಳ ವರ್ಷಗಳ  ಕಠಿಣ ಪರಿಶ್ರಮದಿಂದ ಸಾಧಿಸಿ ಈ ಒಂದು ಹಂತಕ್ಕೆ ಬೆಳೆದು ಬಂದಿದ್ದಾರೆ. ಒಂದು ಸಲ ಬಿದ್ದರೆ ಎದ್ದೇಳುವುದು ಕಷ್ಟ. ಅವರು ಸಮಾಧಾನದಿಂದ ಸಮಯಕ್ಕಾಗಿ ಕಾದು  ಎಲ್ಲವನ್ನೂ ಪರಿಶ್ರಮದಿಂದ  ಕಿರಣ್‌ ಕುಮಾರ್ ಅವರು ಕನಸನ್ನು ಒಂದು ಮಾಧ್ಯಮವನ್ನಾಗಿ ಮಾಡಿಕೊಂಡು ಸಾಧನೆ ಮಾಡಿದ್ದಾರೆ. ಧರ್ಮ ಎನ್ನುವ ಹೆಸರು ಇದರಲ್ಲಿ ಇದೆ. ಮಾಧ್ಯಮಗಳಲ್ಲಿ  ನೈತಿಕತೆಯನ್ನು ಎತ್ತಿ ಹಿಡಿಯುವ ಕಾರ್ಯವಾಗಲಿ.  ಯಾರ ಮನಸ್ಸಿಗೂ ನೋವಾಗದೇ ಸತ್ಯಾಸತ್ಯತೆ ತಿಳಿಸುವಂತಹ ಸುದ್ದಿಗಳು ಈ ವಾಹಿನಿ ಹಾಗೂ ಪತ್ರಿಕೆಯಲ್ಲಿ ಮೂಡಿ ಬರಲಿ. ನ್ಯಾಯ ಕೊಡಿಸುವ ಕೆಲಸವಾಗಲಿ. ಎಲ್ಲರ ಮನ ಮನೆಗೆ ಮಾತಾಗಲಿ, ಕರ್ನಾಟಕದ ಎಲ್ಲರ ಸಂತರ ಹಾರೈಕೆ ಇದೆ ಎಂದು ಭಾವಿಸುತ್ತೇನೆ. ಭಗವಂತ ಅವರಿಗೆ ಶಕ್ತಿಯನ್ನು ನೀಡಲಿ.  ಅವರಿಗೆ ಮತ್ತವರ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿಗಳು ಆಶೀರ್ವಚನ ನೀಡಿ ರಾಜಮಹಾರಾಜರು ಸಾಂಸ್ಕೃತಿಕ ನಗರವನ್ನು ಕಟ್ಟಿ ನಮ್ಮ ನಾಡಿಗೆ ಸಂಸ್ಕೃತಿಯನ್ನು ಕೊಟ್ಟಿದ್ದಾರೆ. ವೈಭವವಾದಂತಹ ದಸರಾವನ್ನು ರಾಜರು ಕಟ್ಟಿಕೊಟ್ಟಿದ್ದಾರೆ. ಕಿರಣ್‌ ಕುಮಾರ್‌ ಅವರು ಅಂತಹ ನಾಡಿನಲ್ಲಿ ರಾಜ್ಯಧರ್ಮ ಎನ್ನುವ ವಾಹಿನಿ, ಮೈಸೂರು ವಿಜಯ ಪತ್ರಿಕೆಯನ್ನು ಕಟ್ಟಿದ್ದಾರೆ. ಎಲ್ಲರಿಗೂ ಸುದ್ದಿಯನ್ನು ಮುಟ್ಟಿಸುವಂತಹದ್ದು ಮಾಧ್ಯಮ. ಪತ್ರಿಕಾ ಮಾಧ್ಯಮ ನಮ್ಮ ನಾಡಿನಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮಾಧ್ಯಮ. ಹಾಗೇ ಈಗ ನೂತನವಾಗಿ ಆರಂಭವಾಗಿರುವ ಈ  ಮಾಧ್ಯಮದಿಂದಲೂ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಎಲ್ಲರನ್ನೂ ಸನ್ಮಾರ್ಗಕ್ಕೆ ಕರೆದೊಯ್ಯುವ ಕೆಲಸವಾಗಲಿ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ರಾಜ್ಯಧರ್ಮ ನಾಡಿನ ಮೂಲೆ ಮೂಲೆಯನ್ನು ತಲುಪಲಿ. ತಾಯಿ ಚಾಮುಂಡೇಶ್ವರಿ ಅವರಿಗೆ ಎಲ್ಲ ರೀತಿಯ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ  ಡಾ.ವಿನಯ್‌ ನಾರಾಯಣ್‌ ಪಂಡಿತ್‌,   ರಾಜ್ಯಧರ್ಮ ಸುದ್ದಿವಾಹಿನಿ ಮತ್ತು ಮೈಸೂರು ವಿಜಯ ದಿನಪತ್ರಿಕೆಯ ಪ್ರಧಾನ ಸಂಪಾದಕ  ಕಿರಣ್‌ ಕುಮಾರ್‌ ಸಿ.ಎಂ,  ಮೈಸೂರು ವಿಜಯ ದಿನಪತ್ರಿಕೆಯ ಸಂಪಾದಕಿ  ಶ್ರೀಮತಿ ಶಿಲ್ಪಶ್ರೀ ಕೆ.ಎನ್‌, ರಾಜ್ಯಧರ್ಮ ಸಂಪಾದಕ  ಹರ್ಷ ಸಿ.ಬಿ. ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular