ಮೈಸೂರು: ಗನ್ ಹೌಸ್ ಬಳಿ ತಲೆ ಎತ್ತುತ್ತಿರುವ ಜೆಎಸ್ಎಸ್ ಮಹಾ ಸಂಸ್ಥಾನದ ರಾಜೇಂದ್ರ ಶ್ರೀಗಳ ಪ್ರತಿಮೆ ನಿರ್ಮಾಣ ವಿಚಾರ ಸಂಬಂಧ ಡಿಎಸ್ಎಸ್ ಮುಖಂಡ ಚೋರನಹಳ್ಳಿ ಶಿವಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚೋರನಹಳ್ಳಿ ಶಿವಣ್ಣ, ನಗರದ ಪಡುವಾರಹಳ್ಳಿ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಕಾರ್ಪೋರೇಷನ್ ಮತ್ತು ಜಿಲ್ಲಾಡಳಿತ ವಿರೋಧ ಮಾಡಿತು. ರಾತ್ರೋರಾತ್ರಿ ಅಲ್ಲಿದ್ದ ಪ್ರತಿಮೆಯನ್ನ ಧ್ವಂಸ ಮಾಡುವ ಕೆಲಸವೂ ನಡೆಯಿತು. ಇಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಕೊಟ್ಟು ಜಿಲ್ಲಾಡಳಿತವೇ ಒಂದು ರೀತಿ ಅಸ್ಪೃಶ್ಯತೆ ಆಚರಿಸುತ್ತದೆ. ಪ್ರತಿಮೆ ಅನಾವರಣಕ್ಕೆ ಬೇರೆ ಜಾಗ ಆಯ್ಕೆ ಮಾಡಿಕೊಳ್ಳಲಿ. ಸಾರ್ವಜನಿಕ ಹಿತದೃಷ್ಟಿಯಿಂದ ಅಲ್ಲಿ ನಿರ್ಮಾಣ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದರು.
ಜೆಎಸ್ಎಸ್ ಸ್ವಾಮೀಜಿ ತಟಸ್ಥ ನಿಲುವು ಕುರಿತು ಅಸಮಾಧಾನ ವ್ಯಕ್ತಪಡಿಸಿದ ಚೋರನಹಳ್ಳಿ ಶಿವಣ್ಣ, ಸಮಾಜಕ್ಕೆ ಶಾಂತಿ ಸಾರುವ, ಮತ್ತು ಇನ್ನೊಬ್ಬರಿಗೆ ಬುದ್ದಿ ಹೇಳುವ ಒಂದು ಪೀಠದಲ್ಲಿ ಕುಳಿತು ವಿರೋಧದ ನಡುವೆ ಇಲ್ಲಿ ಪ್ರತಿಮೆ ಮಾಡಲೊರಟಿರುವುದು ಖಂಡನೀಯ. ಆ ಸ್ಥಳ ಬಿಟ್ಟು ಬೇರೆ ಎಲ್ಲಾದರೂ ಪ್ರತಿಮೆ ಅನಾವರಣ ಮಾಡಲಿ ನಮ್ಮದೇನು ಆಕ್ಷೇಪ ಇಲ್ಲ ಎಂದರು.