ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕುರುಬ ಸಮಾಜದ ಹಿತದೃಷ್ಟಿಯಿಂದ ಶಾಸಕ ಡಿ.ರವಿಶಂಕರ್ ನಾಯಕರಾಗಿ ಮುಂದುವರೆಯಲಿದ್ದು, ನಮ್ಮ ಕುಟುಂಬದಿAದ ಅವರ ವಿರುದ್ಧ ಯಾರೂ ಸ್ಫರ್ಧಿಸುವುದಿಲ್ಲ ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಪಟ್ಟಣದ ಸಂಗೊಳ್ಳಿರಾಯಣ್ಣ ಸಮುದಾಯ ಭವನದಲ್ಲಿ ನಡೆದ ತಾಲೂಕು ಕುರುಬರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಬೆಳವಣಿಗೆಗೆ ರಾಜಕೀಯ ಅಧಿಕಾರ ಪ್ರಮುಖವಾದುದು. ಈ ವಿಚಾರದಲ್ಲಿ ನಡೆಯುವ ಅಪಪ್ರಚಾರಗಳಿಗೆ ಶಾಸಕರು ಕಿವಿಗೊಡಬಾರದು ಎಂದರು.
೨೦೦೪ರಲ್ಲಿ ಸಿದ್ದರಾಮಯ್ಯನವರು ಮಂಚನಹಳ್ಳಿ ಮಹದೇವ್‌ಗೆ ಜೆಡಿಎಸ್ ಟಿಕೆಟ್ ನೀಡುವ ಮೂಲಕ ಸಮಾಜವನ್ನು ಒಡೆದಾಳುವ ಕೆಲಸ ಮಾಡಿದರು. ಸಮಾಜ ಮತ್ತು ಕಾಂಗ್ರೆಸ್ ಪಕ್ಷ ನನಗೆ ಎಲ್ಲವನ್ನೂ ನೀಡಿದ್ದು, ಇದಕ್ಕೆ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಮಧುವನಹಳ್ಳಿ ಬಡಾವಣೆಯಲ್ಲಿರುವ ಟಿ.ಮರಿಯಪ್ಪ ವಿದ್ಯಾ ಸಂಸ್ಥೆ ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ೫ ಕೋಟಿ ವೆಚ್ಚವಾಗಲಿದ್ದು, ಇದಕ್ಕಾಗಿ ಸಮಾಜದ ಎರಡು ಎಕರೆ ಜಮೀನು ಮಾರಾಟ ಮಾಡುವ ನಿರ್ಣಯವನ್ನು ಸಂಘ ಕೈಬಿಡಬೇಕೆಂದರು.
ಜಮೀನು ಮಾರಾಟಕ್ಕೆ ಮುಂದಾದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ. ಆದ್ದರಿಂದ ವಿವಿಧ ಅನುದಾನ ತಂದು ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣ ಮಾಡಿಸುತ್ತೇನೆಂದು ಭರವಸೆ ನೀಡಿದ ಶಾಸಕರು ಎಚ್.ವಿಶ್ವನಾಥ್‌ರವರ ಮಾರ್ಗದರ್ಶನದಲ್ಲಿ ಸಮಾಜದ ಏಳಿಗೆಗೆ ಶ್ರಮಿಸುತ್ತೇನೆಂದು ಹೇಳಿದರು.
ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ದೊಡ್ಡಸ್ವಾಮೇಗೌಡ, ಜಿ.ಪಂ. ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಜಯರಾಮೇಗೌಡ, ಮಾರ್ಚಹಳ್ಳಿಶಿವರಾಮು, ಅಮಿತ್.ವಿ.ದೇವರಹಟ್ಟಿ, ಟಿಎಪಿಸಿಎಂಎಸ್‌ನ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಡಿ.ನಟರಾಜು, ಸಂಘದ ಅಧ್ಯಕ್ಷ ಜೆ.ಶಿವಣ್ಣ, ಉಪಾಧ್ಯಕ್ಷ ಸಾಕರಾಜು, ಪ್ರಧಾನಕಾರ್ಯದರ್ಶಿ ಕೆ.ಪ್ರಕಾಶ್, ಕಾರ್ಯದರ್ಶಿ ನಟರಾಜು, ಖಜಾಂಚಿ ಬಿ.ಎಂ.ಗಿರೀಶ್ ಮತ್ತು ನಿರ್ದೇಶಕರು ಹಾಜರಿದ್ದರು.