ಮೈಸೂರು: ಭಾರತೀಯ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭೂಪಡೆ, ವಾಯುಪಡೆ, ನೌಕಾಪಡೆಯ ಸಮಸ್ತ ಸೈನಿಕರಿಗೆ ಆತ್ಮಸ್ಥೈರ್ಯ ,ಧೈರ್ಯ ,ಶಕ್ತಿ ಹಾಗೂ ನಾಗರೀಕರ ಗೌರವ ನೀಡುವ ಕಾರ್ಯವನ್ನು ಮಾಡೋಣ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಕೆ.ವಿ. ಶ್ರೀಮತಿ ರವರು ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಶ್ರೀರಾಮಪುರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಕ್ಷಣಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗುತ್ತಿದೆ. ಭಾರತವನ್ನು ರಕ್ಷಿಸುತ್ತಿರುವ ಎಲ್ಲಾ ಸೈನಿಕರು ರಾಷ್ಟ್ರಕ್ಕಾಗಿ ತಮ್ಮ ತ್ಯಾಗ ಬಲಿದಾನವನ್ನು ಹಾಗೂ ಸೇವೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ . ಮಾರ್ಚ್ ಮೂರನೇ ದಿನ ಪ್ರತಿ ವರ್ಷ ರಾಷ್ಟ್ರೀಯ ರಕ್ಷಣಾ ದಿನ ಆಚರಿಸುವ ಮೂಲಕ ಅವರಿಗೆ ಗೌರವವನ್ನು ತುಂಬುವ ಕಾರ್ಯವನ್ನು ಮಾಡುತ್ತಿರುವುದು ಸಂತೋಷವೆಂದು ತಿಳಿಸಿದರು.
ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ 1933 ರಿಂದ ಪ್ರತಿ ವರ್ಷ ಮಾರ್ಚ್ ಮೂರನೇ ದಿನವನ್ನು ರಾಷ್ಟ್ರೀಯ ರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ರಕ್ಷಣೆಗಾಗಿ 14 ಲಕ್ಷಕ್ಕೂ ಹೆಚ್ಚು ಸೈನಿಕರು ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಭಾರತದ ಭೂಪಡೆ ,ನೌಕಾಪಡೆ, ವಾಯುಪಡೆ ಅತ್ಯಂತ ಶಿಸ್ತು ಹಾಗೂ ದಕ್ಷತೆಯಿಂದ ಕೂಡಿರುವ ಹಾಗೂ ವಿಶ್ವದ ಮಾದರಿ ಸೈನಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತಿರುವ ರಾಷ್ಟ್ರವಾಗಿದೆ. ಸೈನ್ಯ ಶಕ್ತಿಯೆ ರಾಷ್ಟ್ರ ಶಕ್ತಿ. ರಾಷ್ಟ್ರಕ್ಕೇ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿಕೊಂಡು ಹುತಾತ್ಮರಾಗಿದ್ದಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನು ಅರ್ಪಿಸಿಕೊಂಡರು. 1933 ರಲ್ಲಿ ಮಾರ್ಚ್ 3 ಪ್ರಥಮವಾಗಿ ಭಾರತ ರಾಷ್ಟ್ರೀಯ ಸೈನ್ಯ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದೆ. ಪ್ರತಿಯೊಬ್ಬರು ಸೈನಿಕರ ಭದ್ಧತೆಯನ್ನು , ರಾಷ್ಟ್ರ ಸೈನ್ಯ ವ್ಯವಸ್ಥೆಯನ್ನು ಗೌರವಿಸಿ, ಭಾರತದ ರಾಷ್ಟ್ರ ಸೈನ್ಯದ ಶಕ್ತಿಯನ್ನು ಹೆಚ್ಚಿಸೋಣ ಎಂದರು.
ಹೊಸಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ರವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ದೇಶದ ಒಳಗೆ ಮತ್ತು ಹೊರಗೆ ನಡೆಯುವ ಅನೇಕ ಸಮಸ್ಯೆಗಳ ಹೋರಾಟದಲ್ಲಿ ಭಾರತದ ಸೈನ್ಯ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತದೆ . ಯುದ್ಧ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ರಾಷ್ಟ್ರೀಯ ನಾಗರೀಕರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗುವ ಸೈನಿಕರನ್ನು ನಾವೆಲ್ಲರೂ ಗೌರವಿಸೋಣ ಎಂದರು.ಕಾರ್ಯಕ್ರಮದಲ್ಲಿ ಗುಂಡ್ಲುಪೇಟೆ ರಮೇಶ್ ,ಋಗ್ವೇದಿ ಯೂಥ್ ಕ್ಲಬ್ ಅಧ್ಯಕ್ಷರಾದ ಶರಣ್ಯ, ಕಾರ್ತಿಕ್, ಶ್ರಾವ್ಯ , ಕುಸುಮ ಋಗ್ವೇದಿ,ವಿಜಯ್ ಕುಮಾರ್ ಉಪಸ್ಥಿತರಿದ್ದರು.