ಚಾಮರಾಜನಗರ: ಸೈನಿಕರು ದೇವರಿದ್ದಂತೆ. ರಾಷ್ಟ್ರದ ಭದ್ರತೆ ,ಸುರಕ್ಷತೆ, ಸಂರಕ್ಷಣೆ ಸೈನಿಕರ ಮಹಾ ಕೊಡುಗೆ. ದೇಶದ ರಕ್ಷಣೆಯ ಮೂಲಕ ಗೌರವಕ್ಕೆ ಸದಾಕಾಲ ಪಾತ್ರವಾಗುವ ಸೈನಿಕರಿಗೆ ಸ್ಪೂರ್ತಿ ತುಂಬೋಣ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ,ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ,ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ, ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆ ಯಲ್ಲಿ ಭಾರತೀಯ ನೌಕಾಪಡೆಯ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ 1971ರಲ್ಲಿ ಇಂಡಿಯಾ ಮತ್ತು ಪಾಕಿಸ್ತಾನದ ಯುದ್ಧ ನಡೆದಾಗ ಭಾರತೀಯ ನೌಕಾಪಡೆ ಪಾಕ್ ಸೇನೆಯನ್ನು ಸೋಲಿಸಿದ ಸ್ಮರಣೆ ಹಾಗುವೀರ ಮರಣ ಹೊಂದಿದ ಸೈನಿಕರ ಗೌರವಾರ್ಥ ಡಿಸೆಂಬರ್ 4 ಅನ್ನು ಪ್ರತಿ ವರ್ಷ ಭಾರತೀಯ ನೌಕಾಪಡೆಯ ದಿನವನ್ನಾಗಿ ಆಚರಿಸಲಾಗುತ್ತಿದೆ.
ಭಾರತೀಯ ನೌಕಾಪಡೆಯ ಶಕ್ತಿ ಇಡೀ ವಿಶ್ವದಲ್ಲಿ ಐದನೇ ಸ್ಥಾನ ದಲ್ಲಿರುವುದು ಹೆಮ್ಮೆಯ ವಿಷಯ. ಭಾರತದ ಮೂರು ದಿಕ್ಕುಗಳಲ್ಲೂ ಸಮುದ್ರ ತೀರವನ್ನು ಹೊಂದಿದ್ದು ,ದೇಶ ಮತ್ತು ವಿದೇಶಗಳ ಸಂಬಂಧ ವೃದ್ಧಿ ಹಾಗೂ ರಾಷ್ಟ್ರದ ಅಭಿವೃದ್ಧಿ ಸಂಕೇತವಾಗಿ ಇರುವ ನೌಕಾಪಡೆ ಸದಾ ಕಾಲ ಸಂರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಿದೆ. 11 ನೌಕಾನೆಲೆ ಕಾರ್ಯನಿರ್ವಹಿಸುತ್ತಿದ್ದು ದೇಶದ ಹೆಮ್ಮೆಯ ಐಎನ್ಎಸ್ ವಿಕ್ರಮಾದಿತ್ಯ ,ಐ ಎನ್ ಎಸ್ ವಿಕ್ರಾಂತ್ ನೌಕೆಗಳು ರಾಷ್ಟ್ರಕ್ಕೆ ಮತ್ತಷ್ಟು ಗೌರವವನ್ನು ತಂದಿದೆ.
ಯುವಕರು ದೇಶದ ರಕ್ಷಣೆಗೆ ಸುಭದ್ರತೆಗೆ ರಾಷ್ಟ್ರದ ಅಭಿವೃದ್ಧಿಗೆ ಕಾರ್ಯವನ್ನು ಮುಖ್ಯವಾಗಬೇಕು. ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ರಾಷ್ಟ್ರದ ಋಣವನ್ನು ತೀರಿಸುವ ಕಾರ್ಯದಲ್ಲಿ ನಮ್ಮೆಲ್ಲರಿಗೂ ನೌಕಾಪಡೆಯ ದಿನ ಸ್ಪೂರ್ತಿಯಾಗಲಿ . ಭಾರತೀಯ ಇತಿಹಾಸದಲ್ಲಿ ನೌಕಾಪಡೆಯ ಪಿತಾಮಹರಾದ ಶಿವಾಜಿ ಮಹಾರಾಜರ ನೌಕಾ ಶಕ್ತಿ ಅಪಾರವಾಗಿತ್ತು .ಭಾರತದಲ್ಲಿ ನೌಕಾಪಡೆಯ ಇತಿಹಾಸ ಪ್ರಾಚೀನವಾದದ್ದುಎಂದು ಋಗ್ವೇದಿ ತಿಳಿಸಿದರು.
ಉಪನ್ಯಾಸಕ ಶಿವರಾಂ ಮಾತನಾಡಿ ಯುವ ಸಂಘಟನೆಗಳು ರಾಷ್ಟ್ರೀಯ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಹಾಗೂ ನೌಕಾಪಡೆಯ ದಿನವನ್ನು ಆಚರಿಸುವ ಮೂಲಕ ದೇಶದ ನೌಕಾಪಡೆಯ ಪಾತ್ರ ಮತ್ತು ಮಹತ್ವವನ್ನು ಯುವಕರಿಗೆ ತಿಳಿಸುವ ಕಾರ್ಯ ಮಹತ್ತರವಾದದ್ದು ದೇಶದ ಸೈನ್ಯದ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾದ ವ್ಯವಸ್ಥೆಯಾಗಿದೆ ದೇಶಭಕ್ತಿಯನ್ನು ಮೂಡಿಸಿಕೊಳ್ಳುವ ಮೂಲಕ ವಿಶೇಷ ದಿನಗಳ ಆಚರಣೆಯ ಮೂಲಕ ಸಂಭ್ರಮ ಪಡೋಣ ಎಂದು ತಿಳಿಸಿದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೋಳೆ ಮಾತನಾಡಿ ಯುವಕರಿಗೆ ಮಾರ್ಗದರ್ಶನದ ಅವಶ್ಯಕತೆ ಇದೆ. ಉತ್ತಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ದೇಶದ ಬಗ್ಗೆ ಅಭಿಮಾನವನ್ನು ಮೂಡಿಸಿಕೊಳ್ಳೋಣ. ರಾಷ್ಟ್ರವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯುವ ಕಾರ್ಯವನ್ನು ಸದಾ ಕಾಲ ನಿರ್ವಹಿಸೋಣ ಎಂದರು.
ಸಲಹೆಗಾರರಾದ ಶಿವ ಸ್ವಾಮಿ, ಆನಂದ, ಕುಮಾರ, ಹಾಗೂ ಯುವಕರು ಉಪಸ್ಥಿತರಿದ್ದರು