Saturday, April 19, 2025
Google search engine

Homeರಾಜ್ಯಸುದ್ದಿಜಾಲಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಅಗ್ರಸ್ಥಾನಕ್ಕೆ ಏರಿಸಲು ಸಾಮೂಹಿಕ ಪ್ರಯತ್ನ ಮಾಡೋಣ: ಶಾಸಕ...

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿಯೇ ಅಗ್ರಸ್ಥಾನಕ್ಕೆ ಏರಿಸಲು ಸಾಮೂಹಿಕ ಪ್ರಯತ್ನ ಮಾಡೋಣ: ಶಾಸಕ ಡಿ ರವಿಶಂಕರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳು ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿ ನಾಲ್ಕನೇ ಸ್ಥಾನದಲ್ಲಿದ್ದು ಈ ಬಾರಿ ಎಲ್ಲರೂ ಸೇರಿ ಜಿಲ್ಲೆಯಲ್ಲಿಯೇ ಅಗ್ರಸ್ಥಾನಕ್ಕೆ ಏರಿಸಲು ಸಾಮೂಹಿಕ ಪ್ರಯತ್ನ ಮಾಡೋಣ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಮತ್ತು ಪ್ರೌಢಶಾಲಾ ಸಹಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಭರವಸೆಯ ಬೆಳಕು ಹೊತ್ತಿಗೆ ಬಿಡುಗಡೆ ಮತ್ತು ಮುಖ್ಯಶಿಕ್ಷಕರ ಪ್ರಗತಿ ಪರಿಶೀಲನಾ ಸಭೆಯ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರ ಪ್ರಯತ್ನದ ಜತೆಗೆ ಪೋಷಕರ ಸಹಕಾರವೂ
ಫಲಿತಾಂಶ ಏರಿಕೆಯಲ್ಲಿ ಪ್ರಧಾನ ಪಾತ್ರ ವಹಿಸಲಿದೆ ಎಂದರು.

ಶಿಕ್ಷಕರು ವಿದ್ಯಾರ್ಥಿಗಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೆ ಅವರಲ್ಲಿರುವ ಪ್ರತಿಭೆಯನ್ನು ಹೊರ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದರ ಜತೆಗೆ ಅವರಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಗಮನ ಹರಿಸುವಂತೆ ಪ್ರೆರೇಪಣೆ ನೀಡಿ ಅವರ ಬದುಕನ್ನು ಅಸನು ಮಾಡಬೇಕು ಎಂದು ಸಲಹೆ ನೀಡಿ ಶೈಕ್ಷಣಿಕ
ಏಳಿಗೆಯ ವಿಚಾರದಲ್ಲಿ ನಾನು ಸದಾ ಶಿಕ್ಷಕ ಬಾಂಧವರ ಹಿಂದೆ ಇರುತ್ತೇನೆ ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣದ ಅವಧಿ ನಿರ್ಣಾಯಕ ಹಂತವಾಗಿದ್ದು ಈ ಸಮಯದಲ್ಲಿ ತಮ್ಮ ಜವಬ್ದಾರಿಯನ್ನು ಅರಿತು ಭವಿಷ್ಯ ರೂಪಿಸಿಕೊಂಡು ಕಲಿತ ಶಾಲೆಗೆ ಮತ್ತು ಪೋಷಕರಿಗೆ ಉತ್ತಮ ಹೆಸರು ತಂದು ಅಂಕವಾರು ಗಳಿಕೆಯಲ್ಲಿ ಪ್ರಗತಿ ಸಾಧಿಸಿ ಇತರರಿಗೆ ಮಾದರಿಯಾಗಿ ನಮ್ಮ ಕ್ಷೇತ್ರವನ್ನು ರಾಜ್ಯದಲ್ಲಿಯೇ ಪ್ರಥಮ ಸ್ಥಾನಕ್ಕೆ
ಕೊಂಡೋಯ್ಯುವ ಪ್ರಯತ್ನ ಮಾಡಿ ಎಂದು ಕೋರಿದರು.

ಬಿಇಒ ಆರ್.ಕೃಷ್ಣಪ್ಪ ಮಾತನಾಡಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕು ಈ ಹಿಂದೆ ೭ನೇ
ಸ್ಥಾನದಲ್ಲಿ ಇತ್ತು ಶಾಸಕರು, ಶಿಕ್ಷಕರು ಮತ್ತು ಪೋಷಕರ ಸಹಕಾರದೊಂದಿಗೆ ಕಳೆದ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನಗಳಿಸಿದ್ದು ಈ ಬಾರಿ ನಾವು ಅದನ್ನು ಸವಾಲಾಗಿ ಸ್ವೀಕರಿಸಿದ್ದು ಮೊದಲನೇ ಸ್ಥಾನಕ್ಕೆ ಬರಲು ಸಂಘಟಿತ ಪ್ರಯತ್ನ ಮಾಡಿದ್ದು ಇದಕ್ಕೆ ಶಿಕ್ಷಕ ಸಮೂಹ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಎರಡು ತಾಲೂಕುಗಳಿಂದ ಒಟ್ಟು ೭೧ ಪ್ರೌಢಶಾಲೆಗಳಿದ್ದು ಆ ಪೈಕಿ ಕಲಿಕೆಯಲ್ಲಿ ವಿವಿಧ ಶಾಲೆಗಳ ೬೬೪ ಮಕ್ಕಳು ಹಿಂದುಳಿದ್ದಿದ್ದು ಅವರನ್ನು ಶೈಕ್ಷಣಿಕವಾಗಿ ಮೇಲ್ಮಟ್ಟಕ್ಕೆ ತರಲು ನಾವು ಭರವಸೆಯ ಬೆಳಕು ಎಂಬ ಕಿರು
ಹೊತ್ತಿಗೆಯನ್ನು ಹೊರ ತಂದಿದ್ದು ಇದಕ್ಕಾಗಿ ಸಹಕಾರ ನೀಡಿದ ಶಿಕ್ಷಕರು ಮತ್ತು ವಿವಿಧ ಪ್ರೌಢಶಾಲಾ ಹಂತದ ತಂಡಗಳಿಗೆ ಶಿಕ್ಷಣ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಲಿದೆ ಎಂದರು.

ಈ ಬಾರಿ ನಾವು ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೇರಲು ಶಾಸಕರು ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡಿದ್ದು ಅವರ ಆದೇಶದಂತೆ ಕೆಲಸ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಮೇಲಕ್ಕೇರಿಸಿ ಗುರಿ ಸಾಧಿಸಲು ಪ್ರಯತ್ನಿಸುತ್ತಿದ್ದು ಇದಕ್ಕೆ ಪೋಷಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿಕೊಂಡರು.

ಬಿಆರ್‌ಸಿ ವೆಂಕಟೇಶ್, ಅಕ್ಷರದಾಸೋಹ ನಿರ್ದೇಶಕ ಸ್ವಾಮಿಗೌಡ, ಸಿಆರ್‌ಪಿಗಳಾದ ಉದಯಶಂಕರ್,
ವಸಂತ್‌ಕುಮಾರ್, ಪೂರ್ಣಿಮ, ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರಸ್ವಾಮಿ, ಪ್ರೌಢಶಾಲಾ ಶಿಕ್ಷಕರ
ಸಂಘದ ಅಧ್ಯಕ್ಷರಾದ ಸೋಮಶೇಖರ್, ಮಧುಕುಮಾರ್ ಸಂತ ಜೋಸೇಫರ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್‌ಜೀವನ್ ಸೇರಿದಂತೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಎಲ್ಲಾ ಪ್ರೌಢಶಾಲೆಯ
ಮುಖ್ಯಶಿಕ್ಷಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular