ಮೈಸೂರು: ಚುನಾವಣೆಗೂ ಮುನ್ನವೇ ನನ್ನನ್ನು ಜೈಲಿಗೆ ಕಳುಹಿಸುವ ಕೆಲಸವನ್ನು ಸಂಸದ ಪ್ರತಾಪ ಸಿಂಹ ಮಾಡಲಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಸವಾಲು ಹಾಕಿದರು. ಲಕ್ಷ್ಮಣ ಅವರನ್ನು ಜೈಲಿಗೆ ಕಳುಹಿಸುವೆ ಎಂಬ ಪ್ರತಾಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, ನಿಮ್ಹಾನ್ಸ್‌ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ’ ಎಂದರು.
ಟಿಕೆಟ್ ತಪ್ಪಿದ್ದು ಏಕೆ, ಯಾರು ಕಾರಣ ಎಂಬುದನ್ನು ಅವರು ಮೊದಲು ಹೇಳಲಿ ಎಂದು ಸವಾಲು ಹಾಕಿದರು. ನೀವು ನನ್ನ ಎದುರಾಳಿಯೇ ಅಲ್ಲ. ನನ್ನ ಬಗ್ಗೆ ಮಾತನಾಡುತ್ತೀರೇಕೆ? ಎಂದು ಕೇಳಿದರು. ನಾನು ಒಕ್ಕಲಿಗ ಅಲ್ಲ ಎಂಬುದಕ್ಕೆ ಅವರು ದಾಖಲೆ ಕೊಡಲಿ. ನಾವು ಒಕ್ಕಲಿಗನಾಗಿ ಹುಟ್ಟಿದ್ದೇನೆ, ಬೆಳೆಯುತ್ತಾ ವಿಶ್ವಮಾನವ ಆಗಿದ್ದೇನೆ. ಪ್ರತಾಪ ಸಿಂಹ ಹತಾಶರಾಗಿ ನನ್ನ ವಿರುದ್ಧ ಮಾತಾಡುತ್ತಿದ್ದಾರೆ ಎಂದರು. ನಿಮ್ಮ ವಿರುದ್ಧ ಮಾತನಾಡದಂತೆ ತಡೆಯಾಜ್ಞೆ ತಂದಿರೇಕೆ? ತಡೆಯಾಜ್ಞೆ ತೆರವು ಮಾಡಿಸಿ ಬನ್ನಿ ಇಬ್ಬರ ಚರಿತ್ರೆಯ ಬಗ್ಗೆಯೂ ಮುಕ್ತವಾಗಿ ಚರ್ಚೆ ಮಾಡೋಣ. ಎಚ್.ಡಿ. ದೇವೇಗೌಡ ಅವರನ್ನು ನಾನು ಯಾವತ್ತಾದರೂ ಬೈದಿದ್ದರೆ ತೋರಿಸಿ ಎಂದು ಪ್ರತಾಪಗೆ ಸವಾಲು ಹಾಕಿದರು.
ನಾನು ಜೂಜಾಡುವುದಿಲ್ಲ. ಸಿಗರೇಟ್ ಸೇದುವುದಿಲ್ಲ. ರಾತ್ರಿ ವ್ಯವಹಾರ ಮಾಡುವುದಿಲ್ಲ. ಮಡಿಕೇರಿಯಲ್ಲಿ ಎಸ್ಟೇಟ್ ಇಲ್ಲ. ರೆಸಾರ್ಟ್ ಮಾಡಿಲ್ಲ. ನ್ಯಾಯಾಲಯದಲ್ಲಿನ ತಡೆಯಾಜ್ಞೆ ತೆರವು ಮಾಡಿಸಿ, ನನ್ನದು ಕೊಳಕು ಜೀವನವಾ, ನಿಮ್ಮದಾ ಎಂಬುದನ್ನು ಜನರ ಮುಂದೆ ಬಿಚ್ಚಿಡುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.