ಮಂಗಳೂರು: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ಇರುವ ಊಹಾಪೋಹಗಳನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ತಳ್ಳಿಹಾಕಿದ್ದು, ಮಂಗಳೂರಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಕೆ ಹರಿಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಭೇಟಿಯ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
ಕ್ರಾಂತಿಯ ಬಗ್ಗೆ ಮಾತನಾಡುತ್ತಿರುವುದು ಮಾಧ್ಯಮಗಳೇ , ಸಂಕ್ರಾಂತಿ (ಜನವರಿ 14) ಬರಲಿ, ನಂತರ ನಾವು ಮಾತನಾಡೋಣ ಎಂದು ಹರಿಪ್ರಸಾದ್ ಮಂಗಳೂರಿನಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ಬಗ್ಗೆ ಕೇಳಿದಾಗ, ನಿಮಗೆ ಯಾರು ಹೇಳಿದರು, ಅಂತಹ ಯಾವುದೇ ವಿಷಯವಿದ್ದರೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ವಿಷಯ ಹಳೆಯದು. ಹೊಸದೇನಾದರೂ ಇದ್ದರೆ ಕೇಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ಇದರ ಬಗ್ಗೆ ಜನರು ಭವಿಷ್ಯ ನುಡಿಯುತ್ತಲೇ ಇರುತ್ತಾರೆ. ಆದರೆ ಸಂವಿಧಾನದ ಚೌಕಟ್ಟಿನೊಳಗೆ, ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಾಂಗ್ರೆಸ್ ಹೈಕಮಾಂಡ್. ಈ ಊಹಾಪೋಹಗಳು ಎಲ್ಲಿಂದ ಹುಟ್ಟುತ್ತವೆ ಎಂದು ನಮಗೆ ತಿಳಿದಿದೆ. ಯಾರೂ ಇದರ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ ಎಂದು ತಿಳಿಸಿದರು.
ನಿನ್ನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಮತ್ತು ಡಿಸಿಎಂ ಪರ ಘೋಷಣೆ ಕೂಗಿದ್ದಕ್ಕೆ ಪ್ರತಿಕ್ರಿಯಿಸಿ, ಕಾರ್ಯಕರ್ತರು ತಾವು ಬೆಂಬಲಿಸುವ ನಾಯಕರ ಪರ ಘೋಷಣೆಗಳನ್ನು ಕೂಗುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಬಿಜೆಪಿ ನಾಯಕರಿಗಾಗಿ ಘೋಷಣೆಗಳನ್ನು ಕೂಗಲಿಲ್ಲ. ಇಲ್ಲಿ ಯಾವುದೇ ವೈಯಕ್ತಿಕ ಪೂಜೆ ಇಲ್ಲ, ಕಾರ್ಯಕರ್ತರು ತಮ್ಮ ನಾಯಕರನ್ನು ಸ್ವಾಗತಿಸುತ್ತಾರೆ, ಅದರಿಂದ ಯಾವುದೇ ಹಾನಿಯಿಲ್ಲ ಎಂದಿದ್ದಾರೆ. ಇನ್ನೂ ಕಾಂಗ್ರೆಸ್ ಜನಾದೇಶವು ಒಟ್ಟಾರೆಯಾಗಿ ಪಕ್ಷಕ್ಕೆ ಸೇರಿದೆ. ಎಲ್ಲಾ ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಹೆಸರಿನಲ್ಲಿ ಗೆದ್ದರು. ಪಕ್ಷದ ನಿರ್ಧಾರವೇ ಅಂತಿಮ ಎಂದು ಪ್ರತಿಪಾದಿಸಿದರು.



