ಪಿರಿಯಾಪಟ್ಟಣ: ಗ್ರಂಥಾಲಯಗಳು ಜ್ಞಾನದ ದೇವಾಲಯಗಳಿದ್ದಂತೆ ಎಂದು ಬೆಟ್ಟದಪುರ ಡಿಟಿಎಂಎನ್ ಸಂಸ್ಥೆ ಅಧ್ಯಕ್ಷರಾದ ಚಂದ್ರಶೇಖರ್ ಹೇಳಿದರು.
ಸಂಸ್ಥೆಯ ಆವರಣದಲ್ಲಿ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಂಥಾಲಯದಲ್ಲಿ ಸಾಹಿತ್ಯ ಕಲೆ ಸಂಸ್ಕೃತಿ ರಾಜಕೀಯ ಸೇರಿದಂತೆ ಹಲವು ಬಗೆಯ ಪುಸ್ತಕಗಳು ಒಂದೇ ಸೂರಿನಡಿ ದೊರೆಯುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಜನ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಭೇಟಿ ನೀಡಿ ನಮಗಿಷ್ಟವಾದ ವಿಷಯ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವುದರಿಂದ ನಮ್ಮಲ್ಲಿನ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಜತೆಗೆ ನಮ್ಮ ದೈನಂದಿನ ಜೀವನ ಚಟುವಟಿಕೆಯಲ್ಲಿ ಉತ್ತಮ ಹವ್ಯಾಸ ರೂಢಿಸಿಕೊಳ್ಳಬಹುದು ಎಂದರು.
ಗ್ರಂಥಪಾಲಕ ಪುಟ್ಟರಾಜು ಅವರು ಮಾತನಾಡಿ ಆಧುನಿಕ ಡಿಜಿಟಲ್ ಯುಗದಲ್ಲಿಯೂ ಗ್ರಂಥಾಲಯಗಳ ಉಳಿವಿಗೆ ಶ್ರಮಿಸಿದ ಕೀರ್ತಿ ಡಾ.ಎಸ್.ಆರ್ ರಂಗನಾಥ್ ಅವರಿಗೆ ಸಲ್ಲುತ್ತದೆ. ಗ್ರಂಥಪಾಲಕರಾಗಿದ್ದ ಡಾ.ಎಸ್.ಆರ್ ರಂಗನಾಥ್ ಅವರು ಗ್ರಂಥಾಲಯಗಳ ಉಳಿವಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಈ ಸಂದರ್ಭ ಸಂಸ್ಥೆಯ ಆಡಳಿತಾಧಿಕಾರಿ ಜೆ.ಸಿ ನಟರಾಜ್, ನಿರ್ದೇಶಕರಾದ ವಿಜಯ್ ಕುಮಾರ್, ಪ್ರಾಂಶುಪಾಲರಾದ ಸತೀಶ್, ಪ್ರೌಢಶಾಲಾ ಮುಖ್ಯಶಿಕ್ಷಕ ಮುರುಳಿ ಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜರೀನಾ ಖಾನಮ್, ಶಿಕ್ಷಕಿ ಜಯಂತಿ ಹಾಗೂ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.
