ಬೆಂಗಳೂರು: ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ದೂರು ನೀಡಿದ್ದೇವೆ. ಇದೇ ತಿಂಗಳ ೨೦ರಂದು ಮದ್ಯ ಮಾರಾಟ ಬಂದ್‌ಗೆ ತೀರ್ಮಾನಿಸಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದರು.
ಆರ್ಥಿಕ ಇಲಾಖೆಯ ಕಾರ್ಯದರ್ಶಿ ಪಿ.ಸಿ. ಜಾಫರ್ ಅವರನ್ನು ಸಂಘದ ಪದಾಧಿಕಾರಿಗಳ ಜೊತೆ ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿಚಾರಗಳನ್ನು ಆರ್ಥಿಕ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ
ಸಂಘದ ಬೇಡಿಕೆಗಳನ್ನು ಅಧಿಕಾರಿಗಳ ಮುಂದೆ ಇಟ್ಟಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ. ಆ ಬಳಿಕ ಮುಖ್ಯಮಂತ್ರಿಯ ಜೊತೆಗೂ ಮಾತುಕತೆ ನಡೆಸಿ, ತೀರ್ಮಾನ ತೆಗೆದುಕೊಳ್ಳುವ ವಿಶ್ವಾಸವಿದೆ’ ಎಂದರು.
ಬಂದ್‌ಗೆ ವಿರೋಧ: ಆದರೆ, ಮದ್ಯ ಮಾರಾಟ ಬಂದ್‌ಗೆ ಕೆಲವರ ವಿರೋಧ ವ್ಯಕ್ತವಾಗಿದೆ. ಬಂದ್ ಬಗ್ಗೆ ಗುರುಸ್ವಾಮಿ ಏಕಾಏಕಿ ನಿರ್ಧಾರ ಮಾಡಿದ್ಧಾರೆ. ಚರ್ಚೆ ನಡೆಸದೆ ಮಾಧ್ಯಮ ಹೇಳಿಕೆ. ಜಿಲ್ಲಾ ಸಂಘಗಳನ್ನು ವಿಶ್ವಾಸಕ್ಕೆ ಪಡೆದಿಲ್ಲ. ಮದ್ಯದಂಗಡಿಗಳ ಬಂದ್‌ಗೆ ನಾವು ಸಹಕಾರ ನೀಡಲ್ಲ’ ಎಂದು ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಹೊನ್ನಗಿರಿಗೌಡ ಹೇಳಿದರು.
ಮದ್ಯ ಮಾರಾಟಕ್ಕೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಒಳ್ಳೆಯ ಅಧಿಕಾರಿಗಳನ್ನು ನಿಯೋಜಿಸಬೇಕೆಂದು ಬೇಡಿಕೆ ಇಡಬೇಕು. ಅದನ್ನು ಬಿಟ್ಟು ಬಂದ್ ಮಾಡಲು ಸಾಧ್ಯವಿಲ್ಲ’ ಎಂದು ಕೆಲವು ಮದ್ಯ ಮಾರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.