ಮೈಸೂರು: ಹಿರಿಯ ಸಾಹಿತಿ ಎಸ್‌ಎಲ್ ಬೈರಪ್ಪ ಅವರು ವಿಧಿವಶರಾಗಿದ್ದು, ಇಂದು ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ನಡೆಯಲಿದೆ. ಬ್ರಾಹ್ಮಣ ಸಂಪ್ರದಾಯ ರೀತಿಯಲ್ಲಿ ಹಾಗೂ ಸಕಲ ಸರ್ಕಾರಿ ಗೌರವಗಳಿಂದಿಗೆ ಬೈರಪ್ಪ ಅವರ ಅಂತ್ಯಕ್ರಿಯೆ ನಡೆಯಲಿದ್ದು, ಇದಕ್ಕಾಗಿ ಕುಟುಂಬಸ್ಥರು ಹಾಗೂ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡುತ್ತಿದೆ.
94 ವರ್ಷದ ಸಾಹಿತಿ ಬೈರಪ್ಪ ಅವರು ವೈಸಹಜ ಖಾಯಿಲೆಯಿಂದ ನಿಧನರಾಗಿದ್ದು, ಅವರ ಅಗಲಿಕೆಗೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಇಂದು ಇವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ. ಈಗಾಗಲೇ ಮೈಸೂರು ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಂಡಿದೆ. ಇಂದು 11:30 ರ ವೇಳೆಗೆ ಬ್ರಾಹ್ಮಣ ಸಂಪ್ರದಾಯದಂತೆ ಭೈರಪ್ಪ ಅಂತ್ಯಕ್ರಿಯೆ ನೆರವೇರಲಿದೆ.
ನಿನ್ನೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬೈರಪ್ಪ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದು ಅಲ್ಲಿನ ಕಲಾಮಂದಿರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತದೇಹವನ್ನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಶವಗಾರದಲ್ಲಿ ಇರಿಸಲಾಯಿತು.
ಇಂದು ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಯಿಂದ ನೇರವಾಗಿ ಮೈಸೂರಿನ ಕುವೆಂಪು ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದೆ. ಮನೆಯ ಬಳಿಯೂ ಸ್ವಲ್ಪ ಸಮಯ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 10.30ರ ವರೆಗೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇದ್ದು, ನಂತರ ಕುಟುಂಬಸ್ಥರಿಂದ ಅಂತಿಮ ಪೂಜೆ ವಿಧಿವಿಧಾನ ನಡೆಯಲಿದೆ. ಮನೆಯ ಬಳಿ ಕುಟುಂಬಸ್ಥರು ಎಲ್ಲಾ ವಿಧಿವಿಧಾನಗಳನ್ನು ನಡೆಸಲಿದ್ದಾರೆ. ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.
ವಿಲ್ ವಿವಾದ:
ಬೈರಪ್ಪ ಅವರು ನಿಧನರಾಗುತ್ತಿದ್ದಂತೆ ಅವರು ಬರೆದಿದ್ದ ಉಯಿಲು ವೈರಲ್ ಆಗುತ್ತಿದೆ. ತಮ್ಮ ಮಕ್ಕಳಿಂದ ತಮಗೆ ಅಂತ್ಯಸಂಸ್ಕಾರ ಬೇಡ, ತಮ್ಮ ಹುಟ್ಟೂರು ಸಂತೇಶಿವರದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿ. ಜೊತೆಗೆ ನನ್ನ ಯೋಗಕ್ಷೇಮದ ಬಗ್ಗೆ ಮಗಳಾಗಿ ಕಾಳಜಿ ವಹಿಸುತ್ತಿರುವ ಸಹನಾ ವಿಜಯ ಕುಮಾರ್ ಈ ಕಾರ್ಯವನ್ನು ಮಾಡಬೇಕು ಎಂದು ಬೈರಪ್ಪ ಬರೆದಿದ್ದ ವಿಲ್ ಬೆಳಕಿಗೆ ಬಂದಿತ್ತು.
ಇದು ವಿವಾದಗಳಿಗೆ ಎಡೆಮಾಡಿ ಕೊಡುತ್ತಲೇ ಸ್ಪಷ್ಟನೆ ನೀಡಿದ ಸಹನಾ ವಿಜಯ ಕುಮಾರ್, ಅಂತ್ಯಕ್ರಿಯೆ ಕುರಿತಂತೆ ಬೈರಪ್ಪ ಅವರು ಬರೆದಿರುವ ಉಯಿಲು ಸತ್ಯ. ಆದರೆ ಆ ವಿಚಾರ ಈಗಾಗಲೇ ಸುಖಾಂತ್ಯ ಕಂಡಿದೆ. ನಾನು, ಬೈರಪ್ಪ ಅವರ ಪುತ್ರರ ಜೊತೆ ಅಂತ್ಯಕ್ರಿಯೆಯ ವಿಧಿವಿಧಾನಗಳಲ್ಲಿ ಭಾಗವಹಿಸುತ್ತೇನೆ. ಮೂವರು ಒಡಗೂಡಿ ಅಂತಿಮ ವಿಧಿವಿಧಾನವನ್ನು ನೆರವೇರಿಸುತ್ತೇನೆ ಎಂದಿದ್ದಾರೆ.