ನವದೆಹಲಿ: ರಾಜ್ಯ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಸಮರ, ಬಣ ಬಡಿದಾಟಗಳು ಗರಿಗೆದರಿರುವಂತೆ ಬಿಜೆಪಿ ಪಾಳಯದಲ್ಲೂ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಹಗ್ಗ ಜಗ್ಗಾಟ ನಡೆಯುತ್ತಿದ್ದು, ತೆರೆಮರೆಯಲ್ಲಿ ಮತ್ತೆ ಬಿಜೆಪಿ ರೆಬೆಲ್ ನಾಯಕರು ತಮ್ಮ ತಂತ್ರಗಾರಿಕೆ ಶುರುಮಾಡಿದ್ದಾರೆ.
ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಬಂಡಾಯ ನಾಯಕರೊಂದಿಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರೂ ಕೂಡ ಲಾಬಿ ನಡೆಸುತ್ತಿದ್ದಾರೆಂದು ಮಾತುಗಳು ಕೇಳಿ ಬಂದಿವೆ ಎನ್ನಲಾಗುತ್ತಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವಿ.ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ನನಗೆ ಯಾವುದೇ ಆಸಕ್ತಿಯಿಲ್ಲ. ಪಕ್ಷದ ಹೈಕಮಾಂಡ್ ಈಗಾಗಲೇ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿದೆ. ಈ ಗೌರವದಿಂದ ತೃಪ್ತನಾಗಿದ್ದೇನೆಂದು ತಿಳಿಸಿದ್ದಾರೆ.
ಈ ಬಗ್ಗೆ ಕೋಲಾರ ಸಂಸದ ಮಲ್ಲೇಶ್ ಬಾಬು ಅವರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಈ ಕುರಿತು ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ತುಮಕೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇನೆ. ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿ ಈಗಾಗಲೇ ಗೌರವ ನೀಡಿದೆ ಎಂದು ತಿಳಿಸಿದರು.
ಇದೇ ವೇಳೆ ಕನ್ನಡದಲ್ಲೇ ರೈಲ್ವೆ ಇಲಾಖೆ ಪರೀಕ್ಷೆ ಬರೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಪ್ಪಿದ್ದು, ನಾನು ಹಾಗೂ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಪ್ರಧಾನಿಗಳಿಗೆ ಒತ್ತಡ ಹಾಕಿ ಒಪ್ಪಿಸಿದ್ದೇವೆಂದು ಹೇಳಿದರು. ಇನ್ನೂ ಕನ್ನಡದಲ್ಲೇ ರೈಲ್ವೆ ಪ್ರವೇಶ ಪರೀಕ್ಷೆ ಬರೆಯಬೇಕು ಎಂಬ ಕನ್ನಡಿಗರ ಬಹುದಿನಗಳ ಬೇಡಿಕೆ ಶೀಘ್ರದಲ್ಲೇ ಈಡೇರಲಿದ್ದು, ಮೋದಿಯವರು ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ನಡುವೆ ದ್ವೇಷ ಭಾಷಣ ಕಾಯ್ದೆ ಮಂಡನೆ ಕುರಿತು ಪ್ರತಿಕ್ರಿಯಿಸಿದ ಅವರು ಸಂಸ್ಕಾರ, ಸಂಸ್ಕೃತಿ ಗೊತ್ತಿಲ್ಲದವರು ಹೀಗೆಲ್ಲ ಮಾಡುತ್ತಾರೆ. ಇದು ಮೊಂಡುತನದ ಪರಮಾವಧಿ. ಈ ವಿಚಾರದಲ್ಲಿ ಗೃಹ ಸಚಿವ ಪರಮೇಶ್ವರ್ ನಿಮಿತ್ತ ಅಷ್ಟೇ, ರಾಜ್ಯ ಸರ್ಕಾರ ಮಾಡಿಸುತ್ತಿದೆ. ಪಾಪದ ಕೊಡ ತುಂಬಿರೋದರಿಂದ ಪಾಪದ ಕೆಲಸ ಮಾಡುತ್ತಿದ್ದಾರೆ. ಕಾಯ್ದೆ ಜಾರಿಗೆ ತಂದಿರುವರೇ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದಿದ್ದಾರೆ. ಇನ್ನೂ ರಾಜಕೀಯದಲ್ಲಿ ಸಿಎಂ ಬೇಳೆಕಾಳು ಬೇಯುತ್ತಿಲ್ಲ. ಹಳೇ ಸಿದ್ದರಾಮಯ್ಯ ಇವತ್ತಿಲ್ಲ, ಹೊಸ ಸಿದ್ದರಾಮಯ್ಯ ಅವರೂ ಇಲ್ಲ. ಪರಮೇಶ್ವರ್ ಸಿಎಂ ಆಗಲಿ ಅಂತ ನಾನು ಭಾಷಣ ಮಾಡಿಲ್ಲ. ಪರಮೇಶ್ವರ್ ಅವರು ತೊಟ್ಟಿಲು ತೂಗುತ್ತಾರೆ, ಮಗುವನ್ನೂ ಅಳಿಸುತ್ತಾರೆ ಎಂದು ಹೇಳಿದರು.



