ಮುಂಬಯಿ : ಸ್ಥಳೀಯ ಸಂಸ್ಥೆ ಚುನಾವಣೆಯ ನಂತರ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಪಕ್ಷದಿಂದ ಅಮಾನತುಗೊಂಡಿದ್ದ ಮಹಾರಾಷ್ಟ್ರದ ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಿಂದ ಹೊಸದಾಗಿ ಆಯ್ಕೆಯಾದ ಹನ್ನೆರಡು ಕಾಂಗ್ರೆಸ್ ಕೌನ್ಸಿಲರ್‌ಗಳು ಔಪಚಾರಿಕವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚವಾಣ್ ಬುಧವಾರ ಈ ಬೆಳವಣಿಗೆಯನ್ನು ದೃಢಪಡಿಸಿದ್ದು, ಕೌನ್ಸಿಲರ್‌ಗಳ ನಿರ್ಧಾರವು ಅಧಿಕಾರದ ಬೆನ್ನಟ್ಟುವಿಕೆಗಿಂತ ಅಭಿವೃದ್ಧಿಗೆ ಬದ್ಧತೆಯಿಂದ ನಡೆಸಲ್ಪಟ್ಟಿದೆ ಎಂದು ಹೇಳಿದ್ದಾರೆ. ಜನರು ಈ ಕೌನ್ಸಿಲರ್‌ಗಳನ್ನು ಆಯ್ಕೆ ಮಾಡಿದ್ದು, ಅವರು ನಾಗರಿಕರಿಗೆ ಅಭಿವೃದ್ಧಿಯ ಭರವಸೆ ನೀಡಿದ್ದರು.
ಬಿಜೆಪಿ ನೇತೃತ್ವದ ಸರ್ಕಾರವು ಕ್ರಿಯಾಶೀಲವಾಗಿದೆ ಮತ್ತು ನ್ಯಾಯ ಮತ್ತು ಅಭಿವೃದ್ಧಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ನಂಬುತ್ತಾರೆ ಎಂದು ಚವಾಣ್ ತಿಳಿಸಿದರು.
ಇನ್ನೂ ಡಿಸೆಂಬರ್ 20 ರಂದು ಥಾಣೆ ಜಿಲ್ಲೆಯ ಅಂಬರ್ನಾಥ್‌ನಲ್ಲಿ ನಡೆದ ಪುರಸಭೆ ಚುನಾವಣೆಯ ನಂತರ ರಾಜಕೀಯ ಗೊಂದಲ ಉಂಟಾಗಿದ್ದು, ಇದರ ಪರಿಣಾಮವಾಗಿ ಜನಾದೇಶ ಮುರಿದುಬಿದ್ದಿದೆ. ಅಲ್ಲದೆ ಬದ್ಧವೈರಿ ಕಾಂಗ್ರೆಸ್ ಮತ್ತು ಎಐಎಂಐಎಂ ಜೊತೆಗಿನ ಮೈತ್ರಿ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಇಂತಹ ಮೈತ್ರಿಯು ಬಿಜೆಪಿಯ ಸಿದ್ಧಾಂತ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ.
ಈ ಒಪ್ಪಂದಗಳನ್ನು ಪಕ್ಷ ಒಪ್ಪುವುದಿಲ್ಲ. ತೀರ್ಮಾನ ತೆಗೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಮೈತ್ರಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದರಲ್ಲದೆ, ಅಂಬರ್‌ನಾಥ್‌ನಲ್ಲಿ ಶಿಂಧೆ ಶಿವಸೇನೆಯು ಒಂಟಿಯಾಗಿ 27 ಸೀಟುಗಳನ್ನು ಪಡೆದಿದ್ದರೂ ಬಿಜೆಪಿಯು ಎನ್‌ಸಿಪಿ (ಅಜಿತ್), ಕಾಂಗ್ರೆಸ್ ಜೊತೆ ಸೇರಿ 31 ಸೀಟು ಬಲದಿಂದ ಸೇನೆಯನ್ನು ಬದಿಗೊತ್ತಿ ಪಾಲಿಕೆ ಅಧಿಕಾರಕ್ಕೇರಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಮುಜುಗರಕ್ಕೊಳಗಾದ ಕಾಂಗ್ರೆಸ್ ಘಟಕವು 12 ಕೌನ್ಸಿಲರ್‌ಗಳು ಮತ್ತು ಬ್ಲಾಕ್ ಅಧ್ಯಕ್ಷ ಪ್ರದೀಪ್ ಪಾಟೀಲ್ ಎಂಬಾತನನ್ನು ಅಮಾನತು ಮಾಡಿ, ಎಲ್ಲರಿಗೂ ಶೋಕಾಸ್ ನೋಟಿಸ್ ನೀಡಿತ್ತು ಎಂದು ಹೇಳಲಾಗುತ್ತಿದೆ.



