Friday, April 11, 2025
Google search engine

Homeಅಪರಾಧಕಾನೂನುಲಾಕಪ್‌ ಡೆತ್‌ ಪ್ರಕರಣ: ನಾಲ್ವರು ಪೊಲೀಸ್ ಸಿಬ್ಬಂದಿಗೆ 7 ವರ್ಷ ಜೈಲು ಶಿಕ್ಷೆ

ಲಾಕಪ್‌ ಡೆತ್‌ ಪ್ರಕರಣ: ನಾಲ್ವರು ಪೊಲೀಸ್ ಸಿಬ್ಬಂದಿಗೆ 7 ವರ್ಷ ಜೈಲು ಶಿಕ್ಷೆ

ಬೆಂಗಳೂರು: ಅನುಮಾನಾಸ್ಪದವಾಗಿ ವಶಕ್ಕೆ ಪಡೆದಿದ್ದ ವ್ಯಕ್ತಿಯ ಲಾಕಪ್‌ ಡೆತ್‌ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಸಿಐಡಿ ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಒಡಿಶಾ ಮೂಲದ ಮಹೇಂದ್ರ ರಾಥೋಡ್ (42) ಎಂಬಾತನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣರಾಗಿದ್ದ ಆರೋಪದಡಿ ಸಿಬ್ಬಂದಿಗೆ ಶಿಕ್ಷೆ ಪ್ರಕಟವಾಗಿದೆ. ಜೀವನ್ ಭೀಮಾನಗರ ಠಾಣೆಯ ಅಂದಿನ ಅಪರಾಧ ವಿಭಾಗದ ಹೆಡ್ ಕಾನ್ಸ್‌ಟೇಬಲ್ ಎಜಾಜ್ ಖಾನ್, ಕಾನ್ಸ್‌ಟೇಬಲ್‌ಗಳಾದ ಕೇಶವ ಮೂರ್ತಿ, ಮೋಹನ್ ರಾಮ್ ಹಾಗೂ ಸಿದ್ದಪ್ಪ ಬೊಮ್ಮನಹಳ್ಳಿ ಅವರಿಗೆ 7 ವರ್ಷಗಳ ಸಜೆ ಹಾಗೂ 30 ಸಾವಿರ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಜೀವನ್ ಭೀಮಾನಗರ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ ಶಂಕಿತ ಆರೋಪಿಯಾಗಿದ್ದ ಮಹೇಂದ್ರ ರಾಥೋಡ್ ಎಂಬಾತನನ್ನು 2016ರ ಮಾರ್ಚ್ 19ರಂದು ಠಾಣೆಗೆ ಕರೆತರಲಾಗಿತ್ತು. ಹೆಚ್ಎಎಲ್ 2ನೇ ಹಂತದಲ್ಲಿರುವ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ರಾಥೋಡ್, ಅದೇ ಮನೆಯಲ್ಲಿ 3.2 ಲಕ್ಷ ರೂ. ಕಳ್ಳತನ ಮಾಡಿದ್ದ ಆರೋಪ ಕೇಳಿಬಂದಿತ್ತು.

ಅದರಂತೆ ಠಾಣೆಗೆ ಕರೆತಂದಿದ್ದ ಮಹೇಂದ್ರ ರಾಥೋಡ್ ಸಂಜೆ ವೇಳೆಗೆ ಉಸಿರಾಟದ ತೊಂದರೆ, ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಸಾವನ್ನಪ್ಪಿದ್ದ. ಪೊಲೀಸ್ ಸಿಬ್ಬಂದಿಯ ನಿರ್ಲಕ್ಷ್ಯತೆ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದ್ದರ ಪರಿಣಾಮವಾಗಿ ಆತನು ಪೊಲೀಸ್ ವಶದಲ್ಲಿದ್ದಾಗ ಮೃತಪಟ್ಟಿರುವುದು ಸಿಐಡಿ ತನಿಖೆಯಲ್ಲಿ ದೃಢಪಟ್ಟಿತ್ತು.

ಮೃತನ ಸಾವಿಗೆ ಕಾರಣರಾದ ನಾಲ್ವರು ಸಿಬ್ಬಂದಿ ವಿರುದ್ಧ 2019ರಲ್ಲಿ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ಕೃಷ್ಣವೇಣಿ ಅವರು ವಾದ ಮಂಡಿಸಿದ್ದರು. ವಿಚಾರಣೆ ನಡೆಸಿದ ಸಿಐಡಿ ವಿಶೇಷ ನ್ಯಾಯಾಲಯ ಆರೋಪಿತ ಪೊಲೀಸ್ ಸಿಬ್ಬಂದಿಯನ್ನು ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿದೆ.

RELATED ARTICLES
- Advertisment -
Google search engine

Most Popular