ಬೆಂಗಳೂರು : ಲೋಕ ಅದಾಲತ್ ತೀರ್ಪಿನ ಬಗ್ಗೆ ಹೈ ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಲೋಕ ಅದಾಲತ್ ತೀರ್ಪು ಪ್ರಶ್ನಾತೀತವಲ್ಲ ಎಂದು ಪುನರುಚ್ಚರಿಸಿದೆ. ಮೋಟಾರ್ ವಾಹನ ಅಪಘಾತ ಪ್ರಕರಣವೊಂದರಲ್ಲಿ ಲೋಕ ಅದಾಲತ್ ತೀರ್ಪು ಪ್ರಶ್ನಿಸಿ ಹುಬ್ಬಳ್ಳಿಯ ಆನಂದನಗರದ ಬಡ ಕುಟುಂಬದ ಶೈಲಾ ಮತ್ತು ಮಗ ವಿಶಾಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿದೆ.
ಇನ್ನೂ ಲೋಕ ಅದಾಲತ್ ನಲ್ಲಿ ನಮಗೆ ನೀಡಲಾಗಿದ್ದ ಪರಿಹಾರ ಮೊತ್ತ ಕಡಿಮೆ ಮಾಡಿರುವುದು ತಪ್ಪಾಗಿದ್ದು, ನಮ್ಮ ಪರ ವಾದ ಮಂಡಿಸಿದ ಹಿಂದಿನ ವಕೀಲರು ಮತ್ತು ವಿಮಾ ಕಂಪನಿಯ ನಡುವೆ ವ್ಯಾಜ್ಯ ಇತ್ಯರ್ಥವಾಗಿದೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಯಾವತ್ತೂ ಬಂದೇ ಇರಲಿಲ್ಲ. ಆದ್ದರಿಂದ ಪರಿಹಾರದ ಮೊತ್ತವನ್ನು ಕಡಿಮೆ ಮಾಡಿರುವ ಲೋಕ ಅದಾಲತ್ ಆದೇಶ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಅರ್ಜಿದಾರರ ವಾದವನ್ನು ನ್ಯಾಯಪೀಠ ಮನ್ನಿಸಿದೆ.
ಅಲ್ಲದೆ ಅರ್ಜಿ ದಾಖಲಿಸಿದ ದಿನದಿಂದ ಅರ್ಜಿದಾರರಿಗೆ ಪಾವತಿಯಾಗುವ ದಿನದವರೆಗೆ ವಾರ್ಷಿಕ ಶೇ.6ರ ಬಡ್ಡಿಯಂತೆ 9,18,600 ರೂ ಪರಿಹಾರ ನೀಡಬೇಕು ಎಂಬ ನ್ಯಾಯಮಂಡಳಿ ಆದೇಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ಅರ್ಜಿದಾರರ ಪರ ಅವರ ವಕೀಲರು ಸಹಿ ಹಾಕಿದ್ದಾರೆ.
ಒಂದು ವೇಳೆ ಈ ರಿಟ್ ಅರ್ಜಿಯನ್ನು ಮನ್ನಿಸಿದರೆ ಅನಿರೀಕ್ಷಿತ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಪ್ರತಿವಾದಿ ವಿಮಾ ಕಂಪನಿ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.



