ಮಂಗಳೂರು(ದಕ್ಷಿಣ ಕನ್ನಡ): ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕಡಬ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಜಯಣ್ಣ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಕಡಬದ ಪಂಜ ರಸ್ತೆಯ ವಿದ್ಯಾನಗರದ ಬಾಡಿಗೆ ಮನೆ ಹಾಗೂ ಕಛೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕುಶಾಲನಗರ ನಿವಾಸಿಯಾಗಿರುವ ಬಿ.ವಿ.ಜಯಣ್ಣ, ಸೋಮವಾರಪೇಟೆ ಪಟ್ಟಣ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದರು. ಚುನಾವಣಾ ಹಿನ್ನೆಲೆಯಲ್ಲಿ ಅವರು ಕಡಬ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವಾರದ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು.
ಅಕ್ರಮ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ಮಡಿಕೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರಿಂದ ಕುಶಾಲನಗರದ ಮನೆ ಸೇರಿದಂತೆ ವಿವಿಧೆಡೆ ದಾಳಿ ಮಾಡಲಾಗಿದ್ದು, ಕಡಬದಲ್ಲಿ ಲೋಕಾಯುಕ್ತ ಮಡಿಕೇರಿ ಇನ್ಸ್‌ಪೆಕ್ಟರ್ ಶಶಿಕುಮಾರ್ ಹಾಗೂ ಸಿಬ್ಬಂದಿಯಿಂದ ದಾಳಿ ನಡೆಸಲಾಗಿದೆ.