ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ವಿರುದ್ಧ ಎಫ್ಐಆರ್ ದಾಖಲಿಸಿರುವ ಮೈಸೂರು ಲೋಕಾಯುಕ್ತ ಪೊಲೀಸರು ಈ ಸಂಬಂಧ ತನಿಖೆಗಾಗಿ 4 ತಂಡ ರಚನೆ ಮಾಡಿದ್ದಾರೆ.
ಮೈಸೂರು ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್‌ಪಿ ಎಸ್. ಮಾಲತೇಶ್ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ಗೆ ಶನಿವಾರ ತುರ್ತು ಸಭೆ ನಡೆಸಿದ ಎಸ್‌ಪಿ ಉದೇಶ್, ಪ್ರಕರಣ ಸಂಬಂಧ ದಾಖಲೆಗಳ ಪರಿಶೀಲನೆ ನಡೆಸಿದರು.
ಕೋರ್ಟ್‌ನಿಂದ ನೀಡಿರುವ ದಾಖಲೆಗಳು ಹಾಗೂ ದೂರಿನಲ್ಲಿ ಅಡಕವಾಗಿರುವ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಮುಂದಿನ ಒಂದೆರಡು ದಿನಗಳ ಕಾಲ ದಾಖಲೆಗಳ ಸಂಪೂರ್ಣ ಪರಿಶೀಲನೆ ನಡೆಸಲಿದೆ ಎಂದು ಹೇಳಲಾಗಿದೆ.
ಯಾವ್ಯಾವ ವಿಚಾರಗಳ ತನಿಖೆ
ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮೈಸೂರು ತಾಲೂಕು ಕೆಸರೆಯ ಸರ್ವೇ ನಂ. 462ರಲ್ಲಿ 3.16 ಎಕರೆ ಜಮೀನಿನ ಇದುವರೆಗಿನ ಬೆಳವಣಿಗೆಯ ಬಗ್ಗೆ ತನಿಖಾ ತಂಡ ಕೂಲಂಕಷವಾಗಿ ತನಿಖೆ ನಡೆಸಲಿದೆ. 1992ರಲ್ಲಿ ಮುಡಾದಿಂದ ಜಮೀನು ವಶಕ್ಕೆ ಪಡೆದಿರುವ ಪ್ರಕ್ರಿಯೆ, 1998ರಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಟ್ಟಿದ್ದು, 2003ರಲ್ಲಿ ಮೂಲ ಖಾತೆದಾರನ ಹೆಸರಿಗೆ ಜಮೀನು ಪರ ಭಾರೆ, 2004ರಲ್ಲಿ ಜಮೀನು ಖರೀದಿ ಮಾಡಿದ ಸಿದ್ದರಾಮಯ್ಯ ಪತ್ನಿಯ ಸಹೋದರ ಮಲ್ಲಿಕಾರ್ಜುನಸ್ವಾಮಿ, 2005ರಲ್ಲಿ ಕೃಷಿ ಭೂಮಿ ಯಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ, 2010ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಯಿಂದ ಸಿದ್ದರಾಮಯ್ಯ ಪತ್ನಿಗೆ ದಾನದ ಮೂಲಕ ಜಮೀನು ನೀಡಿದ್ದನ್ನು ಪರಿಶೀಲಿಸಲಿದೆ.
2021ರಲ್ಲಿ ಪಾರ್ವತಿ ಅವರಿಗೆ ಬದಲಿ 14 ನಿವೇಶನ ಹಂಚಿಕೆ ಮಾಡಿ ಹಕ್ಕು ಪತ್ರ ನೀಡಿರುವ ಬಗ್ಗೆ ತನಿಖೆಯಾಗಲಿದೆ. ಹಾಗೆಯೇ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಿದ್ದರಾಮಯ್ಯ ಅವರ ಪಾತ್ರ ಹಾಗೂ ಅವರ ಕುಟುಂಬದ ಪಾತ್ರದ ಬಗ್ಗೆಯೂ ತನಿಖೆ ನಡೆಯಲಿದೆ.
ತನಿಖಾಧಿಕಾರಿಗಳ ಕಾರ್ಯವೈಖರಿ
- ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ದಾಖಲೆಗಳ ಪರಿಶೀಲನೆ ಮಾಡಬಹುದು
- ದಸ್ತಗಿರಿ ಮಾಡದೇ ತನಿಖೆ ನಡೆಸಬಹುದು
- ಸಾಕ್ಷನಾಶ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಅವರನ್ನು ಬಂಧಿಸಬಹುದು
- ತನಿಖೆ ಸಂದರ್ಭದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಬಹುದು, ಬಂಧಿಸದೆಯೂ ಇರಬಹುದು
- ಆರೋಪಿಗಳನ್ನು ದಸ್ತಗಿರಿ ಮಾಡುವುದು ವಿಳಂಬವಾಗಬಹದು, ಒಂದು ವೇಳೆ ದಸ್ತಗಿರಿಯಾದರೆ ಸಿಆ ರ್ ಪಿಸಿ 439 ಅಡಿ ಜಾಮೀನು ಅರ್ಜಿ ಹಾಕಬೇಕಾಗುತ್ತದೆ. ಈ ವೇಳೆ ಪಿಪಿ ತಕರಾರು ಸಲ್ಲಿಸಿದರೆ ಜಾಮೀನು ವಿಳಂಬವಾಗಬಹುದು.
ಸಿದ್ದುಗೆ ಇರುವ ಸವಾಲುಗಳು
- ದಸರಾ ಪ್ರಯುಕ್ತ ನ್ಯಾಯಾಲಯಗಳು ಅ. 2ರಿಂದ 13ರ ವರೆಗೆ ರಜೆ ಇರುವುದು
- ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ತುರ್ತು ಆದೇಶ ನಿರಾಕರಿಸುವ ಸಾಧ್ಯತೆ ಹೆಚ್ಚು
ತನಿಖಾಧಿಕಾರಿಗಳ ಮುಂದಿನ ನಡೆ ಏನು?
- ಎಫ್ಐಆರ್ ಅನಂತರ ಆರೋಪಿಗಳಿಗೆ ತನಿಖಾಧಿಕಾರಿ ನೋಟಿಸ್ ಕೊಡಬೇಕು
- ಸಿಆರ್‌ಪಿಸಿ 41ಅಡಿ ನೋಟಿಸ್ ಜಾರಿ ಮಾಡಬೇಕು
- ಮುಡಾದಲ್ಲಿ ಮೂಲದಾಖಲೆಗಳನ್ನು ವಶಪಡಿಸಿಕೊಳ್ಳುವುದು
- ಆರೋಪಿಗಳಿಂದ ದಾಖಲೆಗಳನ್ನು ವಶಪಡಿಸಿಕೊಳ್ಳುವುದು
- ಆಯಾ ಸಂದರ್ಭದಲ್ಲಿದ್ದ ಮುಡಾ ಅಧಿಕಾರಿಗಳನ್ನು ಪತ್ತೆ ಹಚ್ಚುವುದು
- ಆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದು
- ಹೆಚ್ಚುವರಿ ಆರೋಪಿಗಳು
ಕಂಡುಬಂದರೆ ಅವರನ್ನು ಪ್ರಕರಣಕ್ಕೆ ಸೇರಿಸುವುದು - ಅನಂತರ ದಾಖಲೆಗಳ ಪೋರ್ಜರಿಯಾಗಿದ್ದರೆ ಅಂತಹ ದಾಖಲೆಗಳನ್ನು ಎಫ್ಎಸ್‌ಎಲ್ ವರದಿ ಕೋರುವುದು
ಸಿದ್ದರಾಮಯ್ಯ ಅವರ ಮುಂದಿನ ಆಯ್ಕೆಗಳು
- ಸಿಆರ್‌ಪಿಸಿ 438 ಅಡಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಹಾಕುವುದು
- ಜಾಮೀನು ಜತೆಗೆ 482ರ ಅಡಿ ಪ್ರಕರಣ ರದ್ದತಿ ಕೋರಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಹಾಗೂ ತನಿಖೆಗೆ ತಾತ್ಕಾಲಿಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬಹುದು
- ಎಫ್ಐಆರ್ ಮಾಡಿರುವುದನ್ನು ಪ್ರಶ್ನೆ ಮಾಡುವುದು
- ನ್ಯಾಯಾಲಯದ ಆದೇಶವನ್ನೇ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದು
- ಹೈಕೋರ್ಟ್ ಮಾಡಿರುವ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಬಹುದು