Sunday, September 14, 2025
Google search engine

Homeಅಪರಾಧಕಾನೂನು50 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ನಗದು ಪತ್ತೆ

50 ಕಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ : ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ನಗದು ಪತ್ತೆ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪ ಸಂಬಂಧ ೧೦ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ೫೦ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಹಚ್ಚಿದ್ದು, ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರಿನ ಬೆಸ್ಕಾಂ ಅಧೀಕ್ಷಕ ಅಭಿಯಂತರ ಎಂ.ಲೋಕೇಶ್ ಬಾಬುಗೆ ಸೇರಿದ ಒಟ್ಟು ೫ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ೨ ನಿವೇಶನ, ೩ ವಾಸದ ಮನೆಗಳು ಸೇರಿ ಒಟ್ಟು ೬.೭೦ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬಿಬಿಎಂಪಿ ವಸಂತಪುರ ವಾರ್ಡಿನ ಕಂದಾಯ ನಿರೀಕ್ಷಕ ಎಸ್.ಜಿ.ಸುರೇಶ್‌ಗೆ ಸೇರಿದ ೬ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಫಾರ್ಮ್ ಹೌಸ್ ಸೇರಿದಂತೆ ಒಟ್ಟು ೧.೮೨ ಕೋಟಿ ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ. ಮತ್ತೋರ್ವ ವಿದ್ಯಾರಣ್ಯಪುರ ಉಪ ವಿಭಾಗ ತೆರಿಗೆ ನಿರೀಕ್ಷಕ ಕೃಷ್ಣಪ್ಪಗೆ ಸೇರಿದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದಾಗ ೨.೨೧ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಹಾಗೇ, ದೇವನನಹಳ್ಳಿಯ ಭೀರಸಂದ್ರ ವ್ಯಾಪ್ತಿಯ ಜಿಲ್ಲಾ ಆರೋಗ್ಯಧಿಕಾರಿ ಡಾ.ಸುನೀಲ್ ಕುಮಾರ್‍ಗೆ ಸೇರಿದ ೬ ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ೬.೬೩ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ ಏಕೇಶ್ ಬಾಬುಗೆ ಸೇರಿದ ಒಟ್ಟು ೬ ಸ್ಥಳಗಳ ಮೇಲೆ ದಾಳಿ ನಡೆಸಿದಾಗ ಸ್ಥಿರ, ಚರ ಆಸ್ತಿ ಸೇರಿ ಒಟ್ಟಾರೆ ೭.೯೨ ಕೋಟಿ ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಗದಗ ಜಿಲ್ಲೆಯ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಎಸ್‌ಡಿ ಲಕ್ಷ್ಮಣ ಕೊನೆರಪ್ಪ ಕರ್ಣಿ ನಿವಾಸ, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದಾಗ ಒಟ್ಟು ೨ ಕೋಟಿಗೂ ಅಧಿಕ ಸ್ಥಿರ, ಚರ ಆಸ್ತಿ ಪತ್ತೆಯಾಗಿದೆ. ಕಲಬುರಗಿ ಮುನಿಸಿಪಲ್ ಕಾರ್ಪೋರೇಷನ್ ಅಧೀಕ್ಷಕ ಅಭಿಯಂತರ ರಾಮಪ್ಪ ಪಾಂಡು ಜಾದವ್‌ಗೆ ಸೇರಿದ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದಾಗ ೩.೫೮ ಕೋಟಿ ಮೌಲ್ಯದ ಆಸ್ತಿಗಳು ಪತ್ತೆಯಾಗಿದೆ.

ಅದೇ ರೀತಿ, ಕೊಪ್ಪಳ ತಾಲೂಕಿನ ಅಬಕಾರಿ ನಿರೀಕ್ಷಕ ರಮೇಶ್ ಬಿ.ಅಗಡಿ ನಿವಾಸ ಸೇರಿದಂತೆ ಐದು ಸ್ಥಳಗಳ ಮೇಲೆ ದಾಳಿ ನಡೆಸಿದಾಗ ೧.೬೧ ಕೋಟಿ ಮೌಲ್ಯದ ಆಸ್ತಿ ಬೆಳಕಿಗೆ ಬಂದಿದೆ. ಹಿರಿಯೂರು ತಾಲೂಕಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಸುರೇಶ್‌ಗೆ ಸೇರಿದ ಒಟ್ಟು ಐದು ಸ್ಥಳಗಳ ಮೇಲೆ ದಾಳಿ ನಡೆಸಿದಾಗ ೩.೫ ಕೋಟಿ ಮೌಲ್ಯದ ಆಸ್ತಿಗಳು ಪತ್ತೆಯಾಗಿದ್ದು, ಈ ಸಂಬಂಧ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.


ಚನ್ನಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಉಪಾಧೀಕ್ಷಕ(ಸಶಸ್ತ್ರ) ನಂಜುಂಡಯ್ಯಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದಾಗ ೫ ನಿವೇಶನಗಳು ಸೇರಿದಂತೆ ೧೨ ಕೋಟಿಗೂ ಅಧಿಕ ಮೊತ್ತದ ಆಸ್ತಿ ಪತ್ತೆಯಾಗಿದ್ದು, ಈ ಸಂಬಂಧ ಶೋಧ ಕಾರ್ಯ ಮುಂದುವರೆಸಲಾಗಿದೆ.

RELATED ARTICLES
- Advertisment -
Google search engine

Most Popular