ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಸರ್ಕಾರಿ ಜಮೀನಿಗೆ ನಿಯಮ ಬಾಹಿರ ಆದೇಶ ಮಾಡಿದ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿತ್ತು. ಇಂದು ಐಎಎಸ್ ಅಧಿಕಾರಿ ವಾಸಂತಿ ಅಮರ್ ಅವರ ಕಚೇರಿ, ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮತ್ತೊಂದು ಶಾಕ್ ನೀಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಐಎಎಸ್ ಅಧಿಕಾರಿ ವಾಸಂತಿ ಅಮರ್ ಹಾಗೂ ಟೌನ್ ಪ್ಲಾನಿಂಗ್ ಇಲಾಖೆಯ ಸಹಾಯಕ ನಿರ್ದೇಶಕ ಬಾಗ್ಲಿ ಮಾರುತಿ ಹಾಗೂ ಬಿಬಿಎಂಪಿಯ ಕಾರ್ಯ ನಿರ್ವಾಹಕ ಅಭಿಯಂತರ ಎರ್ರಪ್ಪ ರೆಡ್ಡಿ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದ ತಂಡವು ಇಂದು ಮುಂಜಾನೆಯೇ ಮೂರು ಅಧಿಕಾರಿಗಳ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಮೂವರು ಅಧಿಕಾರಿಗಳ ವಿರುದ್ಧ ಗುರುತರ ಆರೋಪ ಕೇಳಿ ಬಂದಿತ್ತು. ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಾಸಂತಿ ಅಮರ್ ಅವರ ಮೇಲೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿತ್ತು.