Saturday, April 19, 2025
Google search engine

Homeರಾಜ್ಯಸುದ್ದಿಜಾಲಲೋಕಸಿರಿ ಇನ್ನುಮುಂದೆ ಮತ್ತಷ್ಟು ಅರ್ಥಪೂರ್ಣ: ಅನ್ನದಾನೇಶ್ವರನಾಥ ಸ್ವಾಮೀಜಿ

ಲೋಕಸಿರಿ ಇನ್ನುಮುಂದೆ ಮತ್ತಷ್ಟು ಅರ್ಥಪೂರ್ಣ: ಅನ್ನದಾನೇಶ್ವರನಾಥ ಸ್ವಾಮೀಜಿ

ರಾಮನಗರ: ಜಾನಪದ ಲೋಕದ ಮಹತ್ವದ ಕಾರ್ಯಕ್ರಮವಾದ ಲೋಕಸಿರಿಯನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಅದ್ದೂರಿ ಹಾಗೂ ಅರ್ಥಗರ್ಭೀತವಾಗಿ ಆಚರಿಸಲಾಗುವುದು ಎಂದು ಜಾನಪದ ಪರಿಷತ್ತಿನ ಆಡಳಿತ ಮಂಡಳಿ ಸದಸ್ಯರಾದ ಅನ್ನದಾನೇಶ್ವರನಾಥ ಸ್ವಾಮೀಜಿ ಅವರು ತಿಳಿಸಿದರು.

ಅವರು ಕರ್ನಾಟಕ ಜಾನಪದ ಪರಿಷತ್ತು ಹಾಗೂ ಜಾನಪದ ಲೋಕದ ವತಿಯಿಂದ ರಾಮನಗರ ಜಾನಪದ ಲೋಕದಲ್ಲಿ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನ ?ಲೋಕಸಿರಿ-೯೭’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಲೋಕದ ಸೃಷ್ಟಿ ಕರ್ತ, ಜಾನಪದ ಕಲಾವಿದರ ಆರಾಧ್ಯ ದೈವ ಎಚ್.ಎಲ್. ನಾಗೇಗೌಡರ ಪರಿಶ್ರಮವೇ ಜಾನಪದ ಲೋಕ. ಹಿಂದೆ ಹರಿಕಥೆ, ಭಜನೆ, ನಾಟಕ ಎಲ್ಲವನ್ನೂ ಬೆಳಗು ಹರಿಯುವರೆಗೂ ನೋಡುವ ವ್ಯವದಾನ ಜನರಲ್ಲಿತ್ತು, ಇಂದು ಈ ಹವ್ಯಾಸ ಮರೆಯಾಗುತ್ತಿದೆ, ಲೋಕಸಿರಿ ಕಾರ್ಯಕ್ರಮ ನೂರರ ಸನಿಹ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ ಎಂದವರು ಹೇಳಿದರು.

ಗೌರವ ಸ್ವೀಕರಿಸಿ ಸಂವಾದದಲ್ಲಿ ಪಾಲ್ಗೊಂಡ ಕಲಾವಿದ ತೊಪಣ್ಣ ಅವರು ಮಾತನಾಡಿ, ಗುರು ಇಲ್ಲದೆ ಜಾನಪದ ಕಲೆ ಒಲಿಯುವುದಿಲ್ಲ. ಮಾವ ಮುನಿಯಪ್ಪರಿಂದ ಕಲೆ ಕಲಿತು ಇಂದು ಮೂರ್ನಾಲ್ಕು ತಂಡಗಳನ್ನು ಕಟ್ಟಿ ದೆಹಲಿಯಿಂದ ಮೈಸೂರಿನವರೆಗೂ ಕಲಾಪ್ರದರ್ಶನ ನೀಡಿದ್ದೇನೆ. ಅಂದು ಮೂವತ್ತೆಂಟು ರೂಪಾಯಿಯಿಂದ ಕಲಾ ಪ್ರದರ್ಶನ ಮಾಡಿ ಬದುಕು ಕಟ್ಟಿಕೊಂಡಿದ್ದೆವು. ಇಂದು ಕುಣಿಯುತ್ತೇವೆ ಹಣ ಕೊಟ್ಟು ಕಳಿಹಿಸುತ್ತಾರೆ ಆದರೆ ಗೌರವ ಇಲ್ಲ. ಮೊದಲ ಬಾರಿಗೆ ಜಾನಪದ ಲೋಕಕ್ಕೆ ಕರೆಸಿ ಲೋಕಸಿರಿ ಗೌರವ ನೀಡಿ ಸತ್ಕರಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು.

ಹಿಂದೆ ಹಸಿಮಣ್ಣು ಹದ ಮಾಡಿ ಕಾಗದ, ರಟ್ಟಿನಿಂದ ಕೀಲುಕುದುರೆ ಗೊಂಬೆ ತಯಾರಿಸಲಾಗುತ್ತಿತ್ತು, ಬದಲಾದ ಕಾಲಕ್ಕೆ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ನಾನೇ ಸ್ವತಃ ಗೊಂಬೆಗಳನ್ನು ತಯಾರಿಸುತ್ತೇನೆ. ಚರ್ಮದ ತಮಟೆ ಹೋಗಿ ಪೈಬರ್ ತಮಟೆ ಬಂದಿದೆ ಎಂದರು.

ಜಿಲ್ಲಾ ಅಧ್ಯಕ್ಷರಾದ ಸು.ತಾ. ರಾಮೇಗೌಡ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜಸ್ವ ನಿರೀಕ್ಷಕರಾದ ಕೆ. ನಾಗರಾಜು ಕಲಾವಿದರಿಗೆ ಗೌರವಿಸಿ ಶುಭ ಕೋರಿದರು.

ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ-೯೭ರ ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲೆಯ ವೇಮಗಲ್ ಹೋಬಳಿಯ ಮಂಚಂಡಹಳ್ಳಿಯ ಕೀಲುಕುದುರೆ ಕಲಾವಿದರಾದ ತೋಪಣ್ಣ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

ಕಲಾ ಪ್ರದರ್ಶನದಲ್ಲಿ ಹೆಣ್ಣು ಗಾರುಡಿಯಲ್ಲಿ ನಾಗಪ್ಪ, ಗಂಡು ಗಾರುಡಿಯಾಗಿ ಹರೀಶ್, ಗಂಡು ಕೀಲು ಕುದುರೆ ದ್ಯಾವಕೃಷ್ಣ, ಹೆಣ್ಣು ಗೊಂಬೆಯಾಗಿ ಮಹೇಶ್, ಮರಗಾಲು ಕುಣಿತದಲ್ಲಿ ಸುನೀಲ್ ಮತ್ತು ಗಂಗ, ತಮಟೆಯಲ್ಲಿ ನಾಗರಾಜು, ಸೋಮಪ್ಪ ಎಂ, ದುರ್ಗಪ್ಪ, ವೆಂಕಟೇಶ್ ಡಿ.ಎಂ, ನಾರಾಯಣಸ್ವಾಮಿ ಕಲಾಪ್ರದರ್ಶನ ನೀಡಿದರು.

ಕ್ಯೂರೇಟರ್ ಡಾ. ರವಿ ಯು.ಎಂ ನಿರೂಪಿಸಿ, ಕಲಾವಿದರೊಂದಿಗೆ ಸಂವಾದ ನಡೆಸಿಕೊಟ್ಟರು. ಕಾರ್ಯನಿರ್ವಹಣಾಧಿಕಾರಿ ಸರಸವಾಣಿ ಸ್ವಾಗತಿಸಿದರು. ಸಾಹಿತಿ ವಿಜಯ್ ರಾಂಪುರ, ರಂಗಸಹಾಯಕ ಎಸ್.ಪ್ರದೀಪ್, ಸಂಶೋಧನಾ ಸಂಚಾಲಕ ಡಾ. ಸಂದೀಪ್ ಲೋಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular