ಗುಂಡ್ಲುಪೇಟೆ: ರಾಜಧನ ವಂಚಿಸಿ ಕೇರಳಕ್ಕೆ ಅಕ್ರಮವಾಗಿ ಕಲ್ಲು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಗಳ ಮೇಲೆ ಗಣಿ ಇಲಾಖೆ ಅಧಿಕಾರಿ ಜನಾರ್ಧನ್ ಹಾಗೂ ತಹಸೀಲ್ದಾರ್ ಶ್ರೀಶೈಲ ಯಮನಪ್ಪ ತಳವಾರ್ ಜಂಟಿಯಾಗಿ ಕಾರ್ಯಚರನೆ ನಡೆಸಿ ಲಾರಿಯೊಂದನ್ನು ಸೀಜ್ ಮಾಡಿರುವ ಘಟನೆ ತಾಲೂಕಿನ ಗಡಿ ಮದ್ದೂರು ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ತಾಲೂಕಿನ ವಿವಿಧ ಕ್ವಾರಿಗಳಿಂದ ಬಿಳಿ ಕಲ್ಲು ತುಂಬಿಕೊಂಡು ನಿಗಧಿಯಂತೆ ರಾಯಲ್ಟಿ ಕಟ್ಟದೆ ಪ್ರತಿನಿತ್ಯ ಕೇರಳಕ್ಕೆ ಅಕ್ರಮವಾಗಿ ನೂರಾರು ಟಿಪ್ಪರ್ ಲಾರಿಗಳ ಮೂಲಕ ಕಲ್ಲು ಸಾಗಣೆ ಮಾಡಲಾಗುತ್ತಿತ್ತು. ಈ ಬಗ್ಗೆ ಪತ್ರಿಕೆಗಳಲ್ಲಿ ರಾಜಧನ ಮೋಸವಾಗುತ್ತಿರುವ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಆದರೂ ಕೂಡ ಅರಣ್ಯ ಮತ್ತು ಪೊಲೀಸ್ಇಲಾಖೆಯವರು ಮದ್ದೂರು ಹಾಗೂ ಮೂಲೆ ಹೊಳೆಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಸಂಚರಿಸುವ ಟಿಪ್ಪರ್ ಲಾರಿಗಳ ತಪಾಸಣೆ ನಡೆಸಿ ಅಕ್ರಮಕ್ಕೆ ಕಡಿವಾಣ ಹಾಕದೆ ನಿರ್ಲಕ್ಷ್ಯ ವಹಿಸಿದ್ದರು. ಈ ಕಾರಣದಿಂದ ಟಿಪ್ಪರ್ ಗಳು ಎಗ್ಗಿಲ್ಲದೆ ಹಗಲು ರಾತ್ರಿ ಎನ್ನದೆ ಸಂಚಾರ ಮಾಡುತ್ತಿದ್ದವು.
ಇನ್ನೂ ಈ ಕೇರಳಕ್ಕೆ ಅಕ್ರಮವಾಗಿ ಬಿಳಿಕಲ್ಲು ಸಾಗಣೆ ಕುರಿತು ಸಾರ್ವಜನಿಕರಿಂದ ದೂರು ವ್ಯಾಪಕವಾಗಿ ಕೇಳಿ ಬಂದ ಹಿನ್ನಲೆ ತಹಸೀಲ್ದಾರ್ ಹಾಗೂ ಗಣಿ ಇಲಾಖೆ ಅಧಿಕಾರಿಗಳು ಸ್ವತಃ ಫೀಲ್ಡ್ ಗಳಿದು ಮದ್ದೂರು ಚೆಕ್ ಪೋಸ್ಟ್ ಬಳಿ ಟಿಪ್ಪರ್ ಲಾರಿಗಳನ್ನು ತಪಾಸಣೆ ನಡೆಸಿದ ವೇಳೆ ರಾಜಧನ ವಂಚಿಸಿ ಕೇರಳಕ್ಕೆ ಕಲ್ಲು ಸಾಗಣೆ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ನಂತರ ಲಾರಿಯನ್ನು ಸೀಜ್ ಮಾಡಲಾಗಿದೆ.
ಈ ಬಗ್ಗೆ ಚಾಮರಾಜನಗರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಡಿಡಿ ಪದ್ಮಜಾ ಪ್ರತಿಕ್ರಿಯೆ ನೀಡಿ, ಅಕ್ರಮವಾಗಿ ಕಲ್ಲು ತುಂಬಿಕೊಂಡು ಕೇರಳಕ್ಕೆ ಮದ್ದೂರು ಚೆಕ್ ಪೋಸ್ಟ್ ಮೂಲಕ ಸಂಚರಿಸುತ್ತಿದ್ದ ಲಾರಿಯನ್ನು ಸೀಜ್ ಮಾಡಿಪೊಲೀಸ್ರ ವಶಕ್ಕೆ ನೀಡಲಾಗಿದೆ. ದಂಡ ಕಟ್ಟಿದ ಮೇಲೆ ಲಾರಿ ಬಿಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಜವರೇಗೌಡ, ರಾಜಕುಮಾರ್ ಸೇರಿದಂತೆ ಇತರರು ಹಾಜರಿದ್ದರು.