ಕ್ಯಾಲಿಪೋರ್ನಿಯಾ: ಉತ್ತರ ಲಾಸ್ ಏಂಜಲೀಸ್‌ನಲ್ಲಿ ಮತ್ತೆ ಕಾಳ್ಗಿಚ್ಚು ಉಲ್ಬಣಿಸಿದ್ದು, 8 ಸಾವಿರ ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ಆವರಿಸಿದೆ. ಪರಿಣಾಮ 19 ಸಾವಿರಕ್ಕೂ ಹೆಚ್ಚು ಜನರನ್ನು ತಕ್ಷಣ ಸ್ಥಳಾಂತರಕ್ಕೆ ಅಧಿಕಾರಿಗಳು ಆದೇಶಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ಕೈಗೊಂಡು ಮಹಾನಗರ ಪ್ರದೇಶಗಳಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಗಾಳಿಯೂ ಹೆಚ್ಚಿರುವುದರಿಂದ ಲಾಸ್ ಏಂಜಲೀಸ್ ಕೌಂಟಿಯ ಕ್ಯಾಸ್ಟೈಕ್ ಲೇಕ್ ಪ್ರದೇಶದ ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕ್ಯಾಸ್ಟೈಕ್ ಲೇಕ್ ಪ್ರದೇಶದಲ್ಲಿನ ಸುಮಾರು 19 ಸಾವಿರ ಜನರನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಬೆಂಕಿ ಇನ್ನಷ್ಟು ವ್ಯಾಪಿಸಿದರೆ ಇನ್ನೂ 16 ಸಾವಿರ ಜನರನ್ನು ಸ್ಥಳಾಂತರಿಸುವ ಅಗತ್ಯವಿದೆ ಎಂದು ಲಾಸ್ ಏಂಜಲೀಸ್‌ನ ಅಗ್ನಿಶಾಮಕ ಇಲಾಖೆ ತಿಳಿಸಿದೆ.
ಸ್ಥಳದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಕಳೆದ 9 ತಿಂಗಳಿಂದ ಕ್ಯಾಲಿಪೋರ್ನಿಯಾದಲ್ಲಿ ಮಳೆ ಸುರಿಯಲಿಲ್ಲ. ಹೀಗಾಗಿ ಬೆಂಕಿಯ ಅಪಾಯ ಹೆಚ್ಚಾಗಿದೆ. ಈ ನಡುವೆ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕಾಳ್ಗಿಚ್ಚು ನಿಯಂತ್ರಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಕೊಂಚ ನಿರಾಳರಾಗುವ ಸಂಭವವಿದೆ ಎಂದು ವರದಿಯಾಗಿದೆ.