ಲಾಟರಿ ವಿತರಕರು ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.
ಲಾಟರಿ ವಿತರಕರು ಕೇಂದ್ರ ಸರ್ಕಾರಕ್ಕೆ ಸೇವಾ ತೆರಿಗೆ ಪಾವತಿಸುವ ಬಾಧ್ಯತೆ ಹೊಂದಿಲ್ಲ ಬದಲಿಗೆ ಸಂವಿಧಾನದ ನಮೂದು 62, ಪಟ್ಟಿ IIರ ಅಡಿಯಲ್ಲಿ ರಾಜ್ಯ ಸರ್ಕಾರ ವಿಧಿಸುವ ಜೂಜು ತೆರಿಗೆ ಪಾವತಿಸುವುದನ್ನು ಮುಂದುವರೆಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಹೇಳಿದೆ.
ಲಾಟರಿ ಮಾರಾಟದ ಮೇಲೆ ಸೇವಾ ತೆರಿಗೆ ವಿಧಿಸುವ ಕೇಂದ್ರದ ಪ್ರಯತ್ನ ಸ್ವೀಕಾರಾರ್ಹವಲ್ಲ ಎಂಬ ಸಿಕ್ಕಿಂ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ತಾವು ರಾಜ್ಯ ಸರ್ಕಾರದೊಂದಿಗೆ ಖರೀದಿದಾರ-ಮಾರಾಟಗಾರರ ಸಂಬಂಧವನ್ನು ಹೇಳುವ ರೀತಿಯ ಒಪ್ಪಂದ ಮಾಡಿಕೊಂಡಿದ್ದೇವೆಯೇ ವಿನಾ ಏಜೆನ್ಸಿಯಾಗಿಯಲ್ಲ ಎಂದು ಸಿಕ್ಕಿಂನ ಲಾಟರಿ ವಿತರಕರು ವಾದಿಸಿದರು. ಮಾರಾಟವಾದ ಟಿಕೆಟ್‌ಗಳ ಸಂಖ್ಯೆ ಲೆಕ್ಕಿಸದೆ ವಿತರಕರು ರಾಜ್ಯ ಸರ್ಕಾರಕ್ಕೆ ಕನಿಷ್ಠ ₹ 8 ಕೋಟಿ ಮೊತ್ತವನ್ನು ಪಾವತಿಸುವುದು ಕಡ್ಡಾಯವಾಗಿದೆ ಎಂದು ಕೂಡ ಅವರು ತಿಳಿಸಿದರು.
ತಾವೇ ಮಾರ್ಕೆಟಿಂಗ್ ಮತ್ತು ಜಾಹೀರಾತಿನ ಸಂಪೂರ್ಣ ವೆಚ್ಚ ಭರಿಸುವುದರಿಂದ ಮತ್ತು ಸೇವೆಯನ್ನು ನೀಡುತ್ತಿಲ್ಲವಾದ್ದರಿಂದ, ಹಣಕಾಸು ಕಾಯಿದೆಯಡಿಯಲ್ಲಿ ಸೇವಾ ತೆರಿಗೆ ಪಾವತಿಸಲು ತಾವು ಹೊಣೆಗಾರರಲ್ಲ ಎಂದು ವಾದಿಸಿದರು.
ಇದಲ್ಲದೆ, ಲಾಟರಿ ವಿತರಕರ ಮೇಲೆ ಕೇಂದ್ರ ಸರ್ಕಾರ ಸೇವಾ ತೆರಿಗೆ ವಿಧಿಸುವುದರಿಂದ ಸಂವಿಧಾನದ ಪಟ್ಟಿ II ರ ನಮೂದು 62ರ ಅಡಿಯಲ್ಲಿ “ಬೆಟ್ಟಿಂಗ್ ಮತ್ತು ಜೂಜಾಟ” ದ ಮೇಲೆ ಕಾಯಿದೆ ರೂಪಿಸುವ ರಾಜ್ಯ ಸರ್ಕಾರದ ವಿಶೇಷ ಅಧಿಕಾರದ ಉಲ್ಲಂಘನೆಯಾಗುತ್ತದೆ ಎಂದು ಅವರು ವಿವರಿಸಿದರು.
ಇತ್ತ ಕೇಂದ್ರ ಸರ್ಕಾರ, 1994ರ ಹಣಕಾಸು ಕಾಯಿದೆಯ ಸೆಕ್ಷನ್ 65 (19) ರ ವ್ಯಾಖ್ಯಾನದೊಳಗೆ ತೆರಿಗೆದಾರರು ನಡೆಸುತ್ತಿರುವ ಚಟುವಟಿಕೆಯು ವ್ಯವಹಾರ ಸಹಾಯಕ ಸೇವೆಯಾಗಿರುವುದರಿಂದ ಸೇವಾ ತೆರಿಗೆ ವಿಧಿಸುವ ಹಕ್ಕು ತನಗೆ ಇದೆ ಎಂದು ವಾದಿಸಿತ್ತು.
ಆದರೆ ಲಾಟರಿ ಸಂವಿಧಾನದ ರಾಜ್ಯ ಪಟ್ಟಿಯ ನಮೂದು 62 ರ ಭಾಗವಾಗಿರುವ “ಬೆಟ್ಟಿಂಗ್ ಮತ್ತು ಜೂಜಾಟ” ಎಂಬ ಶೀರ್ಷಿಕೆಯಡಿ ಬರುವುದರಿಂದ ರಾಜ್ಯ ಸರ್ಕಾರವಷ್ಟೇ ಅದರ ಕುರಿತು ಕಾಯಿದೆ ರೂಪಿಸಬಹುದು ಎಂದು ಸಿಕ್ಕಿಂ ಹೈಕೋರ್ಟ್ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.