ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಎಂ. ನರಸಿಂಹಲು ಆಯ್ಕೆಯಾಗಿದ್ದಾರೆ.
2024 -25ರ ಸಾಲಿನ ಚುನಾವಣೆ ಕೆ.ಎಫ್.ಸಿ .ಸಿ. ಕಚೇರಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ಇಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ನಡೆಯಿತು. ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯಗಳಿಂದ ಒಟ್ಟು 128 ಆಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದು, ಇದರಲ್ಲಿ ಈಗಾಗಲೇ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಬಾರಿ ಪ್ರದರ್ಶಕ ವಲಯದಲ್ಲಿ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ವಜ್ರೇಶ್ವರಿ ಚಿತ್ರಮಂದಿರದ ಮಾಲಕ ಸುಂದರ್ ರಾಜ್ ಆರ್ ವಿರುದ್ಧ ವೈಭವಿ ಚಿತ್ರಮಂದಿರದ ಮಾಲಕ ನರಸಿಂಹಲು ಎಂ. ಸ್ಪರ್ಧಿಸಿದ್ದರು. ನರಸಿಂಹಲು ಉತ್ತಮ ಅಂತರದಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
ಉಳಿದ ಪದಾಧಿಕಾರಿಗಳ ವಿವರ ಇಂತಿವೆ.
- ನಿರ್ಮಾಪಕ ವಲಯದ ಉಪಾಧ್ಯಕ್ಷರಾಗಿ ವೆಂಕಟೇಶ್ ಕೆ.ವಿ .(ಸಫೇರ್)
- ವಿತರಕ ವಲಯದ ಉಪಾಧ್ಯಕ್ಷರಾಗಿ ಶಿಲ್ಪಾ ಶ್ರೀನಿವಾಸ್
- ಪ್ರದರ್ಶಕರ ವಲಯದ ಉಪಾಧ್ಯಕ್ಷರಾಗಿ ರಂಗಪ್ಪ
- ನಿರ್ಮಾಪಕರ ವಲಯದ ಗೌರವ ಕಾರ್ಯದರ್ಶಿ ರಾಮಕೃಷ್ಣ ಡಿ.ಕೆ.
- ವಿತರಕ ವಲಯದ ಗೌರವ ಕಾರ್ಯದರ್ಶಿ ಎಂ.ಎನ್. ಕುಮಾರ್
- ಪ್ರದರ್ಶಕರ ವಲಯದ ಗೌರವ ಕಾರ್ಯದರ್ಶಿ ಎಲ್. ಸಿ. ಕುಶಾಲ್
- ಖಜಾಂಚಿಯಾಗಿ ಮಾದೇವ್ (ಚಿಂಗಾರಿ)
ವಾಣಿಜ್ಯ ಮಂಡಳಿಯ ಒಟ್ಟು ಮತದಾರರ ಸಂಖ್ಯೆ 1409 ಇದ್ದು, ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.