ಗುಂಡ್ಲುಪೇಟೆ: ತಾಲೂಕಿನ ಕೂತನೂರು ಪಂಚಾಯಿತಿಯಲ್ಲಿ ಎಂ.ಬಿ.ಬುಕ್(ಅಳತೆ ಪುಸ್ತಕ) ನಾಪತ್ತೆಯಾಗಿರುವ ಹಿನ್ನೆಲೆ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪಂಚಾಯಿತಿ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಕೂತನೂರು ಪಂಚಾಯಿತಿ ಕಚೇರಿ ಮುಂದೆ ಜಮಾವಣೆಗೊಂಡ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಗ್ರಾಪಂ ಪಿಡಿಓ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಮಲ್ಲಜಮ್ಮ ಮಾತನಾಡಿ, ಗ್ರಾಪಂ ಪಿಡಿಓ ವಿಜಯಕುಮಾರ್ ದೀವಟಗಿ ಕಳೆದ ಎರಡು ತಿಂಗಳಿಂದ ಸರಿಯಾಗಿ ಕೆಲಸಕ್ಕೆ ಹಾಜರಾಗದ ಕಾರಣ ಗ್ರಾಪಂನಲ್ಲಿ ಯಾವೊಂದು ಕೆಲಸಗಳು ಆಗುತ್ತಿಲ್ಲ. ಗ್ರಾಮದಲ್ಲಿ ಬೀದಿ ದೀಪ, ಸ್ವಚ್ಛತೆ, ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಮದ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
15ನೇ ಹಣಕಾಸು ಯೋಜನೆಯಡಿ ಪಂಚಾಯಿತಿ ಸದಸ್ಯರು ವಿವಿಧ ಕಾಮಗಾರಿಗಳನ್ನು ನಡೆಸಿದ್ದು, ಅದರ ಬಿಲ್ ಮಾಡಿಕೊಳ್ಳಲು ಎಂ.ಬಿ.ಬುಕ್(ಅಳತೆ ಪುಸ್ತಕ) ಕೇಳಿದರೆ ನಾಪತ್ತೆಯಾಗಿದೆ ಎಂದು ಸಬೂಬನ್ನು ಪಿಡಿಓ ಹೇಳುತ್ತಿದ್ಧಾರೆ. ಇದರಿಂದ ವಿವಿಧ ಕಾಮಗಾರಿಗಳ ಲಕ್ಷಾಂತರ ರೂ. ಹಣ ಜಮಾವಣೆಯಾಗಿಲ್ಲ. ಈ ಮಧ್ಯೆ ಗ್ರಾಪಂ ಬಿಲ್ ಕಲೆಕ್ಟರ್ ಇ-ಸ್ವತ್ತು ಮಾಡಲು ಸ್ಥಳೀಯರಿಂದ 8 ರಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪವಿದೆ ಎಂದು ದೂರಿದರು.
ಗ್ರಾಪಂನಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದು, ಗ್ರಾಪಂ ಪಿಡಿಓ ಹಾಗು ಬಿಲ್ ಕಲೆಕ್ಟರ್ ಇಬ್ಬರು ಸೇರಿ ಅಕ್ರಮ ಎಸಗಿದ್ದಾರೆ. ಈ ಕುರಿತು ದಿನನಿತ್ಯ ಗ್ರಾಮಸ್ಥರಿಂದ ದೂರುತ್ತಿದ್ದಾರೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕಲು ಕೂಡಲೇ ಗ್ರಾಪಂ ಪಿಡಿಓ ಹಾಗು ಬಿಲ್ ಕಲೆಕ್ಟರ್ ಇಬ್ಬರನ್ನು ವರ್ಗಾವಣೆ ಮಾಡಿ ಅಮಾನತ್ತು ಪಡಿಸಬೇಕು. ಇಲ್ಲದಿದ್ದರೆ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಹಿತಿ ತಾಪಂ ಇಓ ಶ್ರೀಕಂಠರಾಜೇ ಅರಸು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಇಓ ಹಾಗೂ ಗ್ರಾಮಸ್ಥರ ವಿರುದ್ಧ ವಾಗ್ವಾದ ನಡೆಯಿತು. ನಂತರ ಮಾತನಾಡಿದ ತಾಪಂ ಇಓ, ಮೂರು ದಿನದೊಳಗೆ ಸಮಸ್ಯೆ ಬಗೆಹರಿಸಿ ಗ್ರಾಪಂ ಪಿಡಿಓ ಹಾಗು ಬಿಲ್ ಕಲೆಕ್ಟರ್ ವರ್ಗಾವಣೆ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ರಾಜೇಗೌಡ, ರಮೇಶ್, ಮಹಾದೇವಮ್ಮ, ಸುಧಾ, ಚಿಕ್ಕತಾಯಮ್ಮ, ರಾಜೇಶ್ವರಿ, ಸಿದ್ದರಾಜು ಸೇರಿದಂತೆ ಕೂತನೂರು ಗ್ರಾಮಸ್ಥರು ಹಾಜರಿದ್ದರು.