ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನನ್ನನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ನನಗೊಮ್ಮೆ ಅವಕಾಶ ಮಾಡಿಕೊಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮತದಾರರಲ್ಲಿ ಮನವಿ ಮಾಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಹಿನಕಲ್‌ನಲ್ಲಿ ಪಾದಯಾತ್ರೆ ನಡೆಸಿ ಮನೆಮನೆಗೆ ತೆರಳಿ ಮತಯಾಚಿಸಿ ಬೈಕ್‌ನಲ್ಲಿ ರೋಡ್‌ಶೋ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಈ ಬಾರಿ ಕಾಂಗ್ರೆಸ್ ಅಲೆ ಇದ್ದು ಬಿಜೆಪಿ ಯವರ ಭ್ರಷ್ಟಾಚಾರ, ಕೋಮುವಾದ ಸುಳ್ಳು ಭರವಸೆಗಳು, ಬೆಲೆ ಏರಿಕೆಯಿಂದ ಜನ ಬೇಸತ್ತು ಈ ಬಾರಿ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಕೊಟ್ಟ ಮಾತಿನಂತೆ ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ೫ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ೯ ತಿಂಗಳಲ್ಲಿಯೇ ಈಡೇರಿಸಿದೆ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡಕುಟುಂಬದ ಮಹಿಳೆಯರಿಗೆ ವರ್ಷಕ್ಕೆ ೧ ಲಕ್ಷ ನೀಡುತ್ತದೆ. ರೈತರ ಸಾಲ ಮನ್ನಾ ಕೃಷಿ ಮೇಲಿನ ಜಿ.ಎಸ್.ಟಿ. ಮನ್ನಾ, ದಿನಗೂಲ ರೂ. ೪೦೦ಕ್ಕೆ ಏರಿಕೆ, ಯುವಕರಿಗೆ ಉದ್ಯೋಗ, ಇನ್ನೂ ಹಲವಾರು ಭರವಸೆಗಳನ್ನು ನಮ್ಮ ಪಕ್ಷ ನೀಡಿದೆ. ಆದ್ದರಿಂದ ಪ್ರತಿಯೊಬ್ಬ ಮತದಾರರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಿ ಆಶೀರ್ವದಿಸಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಮಾತನಾಡಿ ಎಂ. ಲಕ್ಷ್ಮಣ್ ಗೆಲುವು ನಿಶ್ಚಿತವಾಗಿದ್ದು, ಸಂವಿಧಾನ ಬದಲಾಯಿಸಲು ಹೊರಟಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಲು ಪ್ರತಿಯೊಬ್ಬರು ತಪ್ಪದೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಸಿದ್ದರಾಮಯ್ಯನವರ ಕೈಬಲಪಡಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹಿನಕಲ್ ಹೊನ್ನಪ್ಪ, ಪ್ರಕಾಶ್, ಶ್ರೀನಿವಾಸ, ದೇವಣ್ಣ, ರಾಜಣ್ಣ, ದೇವರಾಜ್, ಕೆ.ಜಿ. ನಾಗರಾಜ್, ಕೆಂಪನಾಯಕ, ದೊಡ್ಡೇಗೌಡ, ಉದಯ್ ಚಂದ್ರಶೇಖರ್, ಪೈಲ್ವಾನ್ ಕುಮಾರ್, ರಟ್ನಳ್ಳಿ ಶಿವಣ್ಣ, ಮಹದೇವ್, ಮಲ್ಲಣ್ಣ, ರಮೇಶ್ ಹೊಟ್ಟೆಗೌಡ, ಮಂಜು, ಗೊರಳ್ಳಿ ಶಿವರಾಮ್ ಹಾಜರಿದ್ದರು.
