ಮದ್ದೂರು: ಖಾಸಗಿ ಪ್ರಿ-ಸ್ಕೂಲ್ ಅಥವಾ ನರ್ಸರಿ ಶಾಲೆಗಳಿಗೆ ಸೇರಿಸಲು ಸಾಧ್ಯವಾಗದ ಪೋಷಕರಿಗೆ ಮಾತ್ರ ಅಂಗನವಾಡಿ ಕೇಂದ್ರಗಳು ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ. ಈ ಕಲ್ಪನೆಯನ್ನು ತಪ್ಪೆಂದು ಸಾಬೀತುಪಡಿಸುವ ಸಲುವಾಗಿ, ತಾಲೂಕಿನ ಕದಲೀಪುರ ಗ್ರಾಮದ ಅಂಗನವಾಡಿ ವರ್ಣರಂಜಿತ ಕೇಂದ್ರವಾಗಿ ನವೀಕರಣಗೊಂಡಿದೆ.
ತಾಲೂಕಿನ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದಲೀಪುರ ಗ್ರಾಮದಲ್ಲಿ ನವೀಕರಣಗೊಂಡಿರುವ ಅಂಗನವಾಡಿ ಕೇಂದ್ರವನ್ನು ಗುರುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಕೆ.ನಂದೀಶ್ ಗೌಡ ಗುರುವಾರ ಉದ್ಘಾಟಿಸಿದರು.
ಕದಲೀಪುರ ಗ್ರಾಮದಲ್ಲಿದ್ದ ಅಂಗನವಾಡಿ ಕೇಂದ್ರ ಸಾಕಷ್ಟು ಶಿಥಿಲಗೊಂಡಿತ್ತು. ಹೀಗಾಗಿ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ್ದರು. ಈ ವಿಚಾರವಾಗಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದಿದ್ದರು.
ಗ್ರಾಮದ ಸಕರ್ಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಕೇಂದ್ರವನ್ನು ನಡೆಸಲಾಗುತ್ತಿತ್ತು. ಸಾಕಷ್ಟು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸಭೆಯಲ್ಲಿ ನವೀಕರಣಗೊಳಿಸಲು ಅನುಮೋದನೆ ಪಡೆಯಲಾಗಿತ್ತು. ಕಳೆದ ವರ್ಷ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ನಾಂದಿ ದೇಶ್ ಮುಖ್ ರಾಷ್ಟ್ರೀಯ ಗ್ರಾಮಸಭಾ ಪುರಸ್ಕಾರ ಪ್ರಶಸ್ತಿಯನ್ನು ಪಡೆದಿತ್ತು. ಈ ಪ್ರಶಸ್ತಿ ಹಣದಲ್ಲಿ 3 ಲಕ್ಷ , 15 ನೇ ಹಣಕಾಸು ಯೋಜನೆ ಅನುದಾನದಲ್ಲಿ 1.30 ಲಕ್ಷ ಹಾಗೂ ಉಳಿಕೆ ಹಣವನ್ನು ಅಧ್ಯಕ್ಷರಾದ ನಂದೀಶ್ ಗೌಡ ಅವರು ಭರಿಸುವ ಮೂಲಕ ಅಂದಾಜು 7 ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನವೀಕರಣಗೊಳಿಸಿ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ನೀಡಲಾಗಿದೆ.

ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲೂ ಇದೇ ರೀತಿ ಅಂಗನವಾಡಿಗಳನ್ನು ನವೀಕರಿಸಿ ಮತ್ತು ಗೋಡೆ ಮತ್ತು ಕಾಂಪೌಂಡ್ ಗಳ ಮೇಲೆ ವರ್ಣರಂಜಿತ ಮತ್ತು ರೋಮಾಂಚಕ ಕೇಂದ್ರವನ್ನಾಗಿ ಪರಿವತರ್ಿಸುವ ಮೂಲಕ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯರೂಪಕ್ಕೆ ತಂದಿದ್ದು, ತುಂಬಾ ವಿಭಿನ್ನವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಿರುವುದಕ್ಕೆ ಗ್ರಾಮಸ್ಥರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಅಧ್ಯಕ್ಷ ನಂದೀಶ್ ಗೌಡ ಮಾತನಾಡಿ, ಸುಂದರವಾಗಿ ಮತ್ತು ವರ್ಣರಂಜಿತವಾಗಿ ಅಂಗನವಾಡಿ ಕೇಂದ್ರವನ್ನು ನವೀಕರಣಗೊಳಿಸಲಾಗಿದ್ದು, ಶುದ್ದ ಕುಡಿಯುವ ನೀರು, ಶೌಚಗೃಹ, ಸ್ವಚ್ಚತೆ ಹಾಗೂ ಕಾಪೌಂಡ್ ಮೇಲೆ ಜ್ಞಾನಪೀಠ ಪ್ರಶಸ್ತಿ ಬಂದ ಗಣ್ಯರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವಾರು ಗಣ್ಯರ ಭಾವಚಿತ್ರವನ್ನು ಬರೆಸಿದ್ದಾರೆ ಇವರ ಸಾಧನೆಯನ್ನು ಮಕ್ಕಳಿಸುವ ತಿಳಿಸುವ ಕೆಲಸ ಮಾಡಿಸಲಾಗಿದೆ ಹಾಗೂ ಅಂಗನವಾಡಿ ಕೇಂದ್ರ ಆವರಣದಲ್ಲಿ ಸುಂದರ ವಾತಾವರಣ ಇದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಹೆಚ್ಚಿನ ಪೋಷಣೆ ಮತ್ತು ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡಲಾಗುತ್ತದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಫ್ರಿ-ಸ್ಕೂಲ್ ಅಥವಾ ನರ್ಸರಿ ಶಾಲೆಗಳ ವ್ಯಾಮೋಹ ಬಿಟ್ಟು ಅಂಗನವಾಡಿ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಅಧ್ಯಕ್ಷ ನಂದೀಶ್ ಗೌಡ ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ಪದ್ಮಾ ಸದಸ್ಯರಾದ ವೀಣಾ, ಅಪ್ಪಾಜಿಗೌಡ, ಕಮಲಾಕ್ಷ್ಮಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನೇತ್ರಾ, ಪಿಡಿಓ ಲೀಲಾವತಿ ಗ್ರಾಮಸ್ಥರು ಇದ್ದರು.