ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್, ಅಗತ್ಯ ಪರಿಕರಗಳ ವಿತರಣೆ
ಮದ್ದೂರು: ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ನೆರವು ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಕೃಷ್ಣೇಗೌಡ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎಚ್ ಕೆ ನಂದೀಶ್ ಗೌಡ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಕೆಎಂ ಉದಯ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಹುಳಗನಹಳ್ಳಿ ಸರ್ಕಾರಿ ಶಾಲೆಯ ನೂತನ ಪಿಎಂ ಪೋಶನ್ ಶಕ್ತಿ ಕೇಂದ್ರದ ನೂತನ ಕಟ್ಟಡ ಹಾಗೂ ಹೈಟೆಕ್ ಶೌಚಾಲಯ, ಅಡುಗೆಮನೆ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹುಳಗನಹಳ್ಳಿ ಪ್ರಾಥಮಿಕ ಶಾಲೆಯು ತಾಲೂಕಿಗೆ ಮಾದರಿಯಾಗಿದೆ. ನಾನು ಕಂಡಂತೆ ತಾಲೂಕಿನ ಬೇರೆಲ್ಲೂ ಈ ರೀತಿ ಕಟ್ಟಡ ಹಾಗೂ ಶುಚಿತ್ವ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ದಾನಿಗಳ ನೆರವಿನಿಂದ ಸುಮಾರು 30 ಲಕ್ಷ ರೂಗಳ ಅಧಿಕ ವೆಚ್ಚದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉತ್ತಮ ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ ಎಂದರು.
ಕೃಷ್ಣೇಗೌಡ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ನಂದೀಶ್ ಗೌಡ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲೆಗೆ ಹೈಟೆಕ್ ಆಟದ ಮೈದಾನ, ಉದ್ಯಾನವನ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡಿದ ದಾನಿಗಳನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಬ್ಯಾಗ್ ಹಾಗೂ ಅಗತ್ಯ ಪರಿಕರಗಳನ್ನು ಇದೆ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
ಈ ವೇಳೆ ಯಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀಣಾ, ಕದಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ತಿಮ್ಮೇಗೌಡ, ಸದಸ್ಯರಾದ ಕಮಲಾಕ್ಷಿ, ಸೌಭಾಗ್ಯ ,ಜ್ಯೋತಿ ,ಬಿಇಓ ಕಾಳಿರಯ್ಯ ಸೇರಿದಂತೆ ಇತರರು ಹಾಜರಿದ್ದರು.