ಮದ್ದೂರು: ಇಂದು ಮದ್ದೂರು ಪುರಸಭೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದ್ದು, ಅಧಿಕಾರ ಗದ್ದುಗೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಗುದ್ದಾಟ ಜೋರಾಗಿದೆ. ಪುರಸಭೆ ಅಧ್ಯಕ್ಷಗಾದಿ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಅಧಿಕಾರ ಹಿಡಿಯಲು ಹಾಲಿ ಮತ್ತು ಮಾಜಿ ಶಾಸಕರು ರಣತಂತ್ರ ರೂಪಿಸುತ್ತಿದ್ದಾರೆ.
23 ಸದಸ್ಯ ಬಲದ ಪುರಸಭೆಯಲ್ಲಿ ಸ್ಥಳೀಯ ಶಾಸಕ ಹಾಗೂ ಸಂಸದರ ಮತ ಸೇರಿ ಒಟ್ಟು 25 ಮತಗಳಿದ್ದು ಜೆಡಿಎಸ್ಗೆ ಅಧಿಕಾರ ಹಿಡಿಯುವ ಸ್ಪಷ್ಟ ಬಹುಮತ ಇದ್ದರು ಸ್ವಕ್ಷದ ಸದಸ್ಯರ ಅಡ್ಡ ಮತನದಿಂದ ಅಧಿಕಾರ ಕೈತಪ್ಪುವ ಆತಂಕ ಎದುರಾಗಿದೆ.
ಪುರಸಭೆ ಸದಸ್ಯ ಬಲದಲ್ಲಿ ಜೆಡಿಎಸ್ 12, ಕಾಂಗ್ರೆಸ್ 04, ಪಕ್ಷೇತರ 06, ಬಿಜೆಪಿ 01 ಸದಸ್ಯರಿದ್ದಾರೆ. ಇತ್ತ 3 ಪಕ್ಷೇತರರು, 1 ಬಿಜೆಪಿ ಹಾಗು 3 ಜೆಡಿಎಸ್ ಸದಸ್ಯರನ್ನು ಪಕ್ಷಕ್ಕೆ ಸೆಳೆದು ಅಧಿಕಾರ ಹಿಡಿಯಲು ಶಾಸಕ ಕದಲೂರು ಉದಯ್ ರಣತಂತ್ರ ಹೆಣೆದಿದ್ದಾರೆ. ಅತ್ತ ಮಾಜಿ ಶಾಸಕ ಡಿಸಿ ತಮ್ಮಣ್ಣ ಪಕ್ಷದ ಅಧ್ಯಕ್ಷರ ಮೂಲಕ ಪಕ್ಷದ 12 ಸದಸ್ಯರಿಗೆ ವಿಪ್ ಜಾರಿ ಮಾಡಿಸಿದ್ದಾರೆ. ಈ ಮೂಲಕ 1 ಬಿಜೆಪಿ ಹಾಗು 2 ಪಕ್ಷೇತರರ ಜೊತೆ ಅಧಿಕಾರ ಉಳಿಸಿಕೊಳ್ಳಲು ಪ್ರತಿತಂತ್ರ ನಡೆಸುತ್ತಿದ್ದಾರೆ ಒಟ್ಟಿನಲ್ಲಿ ಇಂದಿನ ಮದ್ದೂರು ಪುರಸಭೆಯ ಅಧಿಕಾರ ಗದ್ದುಗೆಯ ಗುದ್ದಾಟ ಎಲ್ಲರಲ್ಲೂ ತೀವ್ರ ಕುತೂಹಲ ಮೂಡಿಸಿರುವುದಂತೂ ಸತ್ಯ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ .