ಜನರಲ್ಲಿ ಆತಂಕ ಉಂಟುಮಾಡಿದ್ದ ಚಿರತೆ ಇದೇ ಇರಬಹುದೆಂಬ ಶಂಕೆ
ಹನೂರು : ಮಧುವನಹಳ್ಳಿ ಸಮೀಪದ ಸಿದ್ದೇಶ್ವರ ಬೆಟ್ಟದಲ್ಲಿ ಭಾನುವಾರ ಬೆಳಗ್ಗೆ ಚಿರತೆ ಬೋನಿಗೆ ಬಿದ್ದಿದೆ. ಕಳೆದ 18 ದಿನಗಳಿಂದ ಜನರಲ್ಲಿ ಆತಂಕ ಉಂಟುಮಾಡಿದ್ದ ಚಿರತೆ ಇದೇ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೋನಿಗೆ ಬಿದ್ದಿರುವ ಚಿರತೆ ಮನುಷ್ಯರ ಮೇಲೆ ದಾಳಿ ಮಾಡಿರುವ ಚಿರತೆಯೇ ಅಥವಾ ಬೇರೆಯದ್ದೇ ಎಂಬುದನ್ನು ಅರಣ್ಯ ಇಲಾಖೆ ದೃಢಪಡಿಸಬೇಕಿದೆ. ಹನೂರು ತಾಲೂಕಿನ ಕಗ್ಗಲಿಗುಂದಿ ಬಾಲಕಿ ಮೇಲೆ ಹಾಗೂ ಕಂಚಗಳ್ಳಿ ಗ್ರಾಮದಲ್ಲಿ ರೈತನ ಮೇಲೆ ದಾಳಿ ನಡೆಸಿ ಜನತೆಯ ನಿದ್ದೆಗೆಡಿಸಿತ್ತು. ಅರಣ್ಯ ಇಲಾಖೆ 6 ಬೋನು, 30 ಕ್ಯಾಮರಾ ಅಳವಡಿಸಿ ಸೆರೆ ಕಾರ್ಯಾಚರಣೆ ನಡೆಸಿತ್ತು.
ಚಿರತೆ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಬಲಿ
ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಬಾಲಕಿ ಸುಶೀಲ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಜೂನ್ 26ರಂದು ಹನೂರು ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗಲಿಗುಂದಿ ಗ್ರಾಮದ ರಾಮು ಹಾಗೂ ಲಲಿತಾ ಎಂಬವರ ಪುತ್ರಿ ಸುಶೀಲಾ ತಮ್ಮ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಚಿರತೆ ದಾಳಿ ನಡೆಸಿತ್ತು.