ಚಾಮರಾಜನಗರ: ಅನುಭವ ಮಂಟಪದಲ್ಲಿ ಅತ್ಯಂತ ಮೌಲ್ಯಯುತ ವಚನಗಳನ್ನು ರಚಿಸಿ ಇಡೀ ಸಮಾಜಕ್ಕೆ ಕಾಯಕದ ಮಹತ್ವದ ಅರಿವು ಮೂಡಿಸಿದವರು ಮಡಿವಾಳ ಮಾಚಿದೇವ ಎಂದು ಅಧ್ಯಾಪಕರಾದ ಪಿ. ಗೋವಿಂದರಾಜು ಅವರು ತಿಳಿಸಿದರು. ನಗರದ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಅವರು ಮಾತನಾಡಿದರು.
ವೃತ್ತಿಯಲ್ಲಿ ಸೈನಿಕರಾಗಿದ್ದ ಮಾಚಿದೇವ ಅವರು ಬಸವಣ್ಣನವರ ವಚನಗಳಿಂದ ಪ್ರಭಾವಿತರಾಗಿ ಅನುಭವ ಮಂಟಪ ಸೇರಿದರು. ಅನುಭವ ಮಂಟಪದಲ್ಲಿದ್ದ ಶಿವಶರಣರ ಬಟ್ಟೆಗಳನ್ನು ಮಾತ್ರ ಶುದ್ಧಿಕರಿಸುವ ಮೂಲಕ ಜನಸಾಮಾನ್ಯರಿಗೆ ಕಾಯಕದ ಮಹತ್ವವನ್ನು ಸಾರಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಮಾಚಿದೇವರ ವಚನಗಳ ಕೊಡುಗೆ ಅಪಾರವಾಗಿದೆ ಎಂದರು. ಸಾಕಷ್ಟು ವಚನಗಳನ್ನು ರಚಿಸುವ ಮೂಲಕ ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ, ಸ್ತ್ರೀಶೋಷಣೆ, ಮೂಢನಂಬಿಕೆ, ಕಂದಚಾರಗಳ ವಿರುದ್ದ ಜನರನ್ನು ಎಚ್ಚರಿಸಿದರು. ಮಾಚಿದೇವರ ಕಾಯಕಕ್ಕೆ ಮಾರುಹೋದ ಬಸವಣ್ಣನವರು ಎನ್ನ ಮನವ ಶುದ್ಧಿ ಮಾಡಿದವ, ಎನ್ನ ಅಂತರಂಗವ ಶುದ್ದಿ ಮಾಡಿದವ ಮಾಚಿದೇವ ಎಂದಿದ್ದಾರೆ. ಅನುಭವ ಮಂಟಪದ ಪ್ರಾಮುಖ್ಯತೆಗೆ ಮಾಚಿದೇವ ಅವರು ಕಾರಣೀಪುರುಷರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಮುದಾಯವು ಸರ್ಕಾರದ ಸೌಲಭ್ಯ, ಸವಲತ್ತುಗಳನ್ನು ಬಳಸಿಕೊಂಡು ಸಾಮಾಜಿಕ, ಅರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಪ್ರಬುದ್ಧತೆ ಹೊಂದಬೇಕು. ಜಿಲ್ಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಅವಶ್ಯವಾಗಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. ಮಡಿವಾಳ ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷರಾದ ನಂಜಪ್ಪ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಗೋಪಾಲ್ ಅವರು ಮಾಚಿದೇವ ಅವರ ಅದರ್ಶ ನಡೆ-ನುಡಿಗಳು ಹಾಗೂ ಸಮುದಾಯದ ಪ್ರಗತಿಗೆ ಅಗತ್ಯವಾಗಿರುವ ವಿಚಾರಗಳ ಬಗ್ಗೆ ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ. ಸುದರ್ಶನ್, ಸಮಾಜದ ಮುಖಂಡರು ಹಾಗೂ ಎಲ್ಲಾ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.