ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಗ್ರಾಮದ ಮುಖ್ಯ ರಸ್ತೆಯು ಹಳ್ಳಬಿದ್ದು ಬೃಹತ್ ಗುಂಡಿಗಳಾಗಿದ್ದರೂ ಇದುವರೆವಿಗೂ ರಸ್ತೆ ದುರಸ್ಥಿ ಮಾಡಿಲ್ಲವೆಂದು ರಸ್ತೆಯಲ್ಲಿಯೇ ಭತ್ತದ ನಾಟಿ ಮಾಡಿ ಪ್ರತಿಭಟಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ, ಬನ್ನೂರು ಮಾರ್ಗದ ಸಾವಿರಾರು ವಾಹನಗಳು ಮೈಸೂರು ಕಡೆ ಪ್ರತಿನಿತ್ಯ ಸಂಚರಿಸುತ್ತಿರುತ್ತವೆ. ಜೊತೆಗೆ ಶಾಲಾ- ಕಾಲೇಜು ವಾಹನಗಳು ಸಹ ಚಲಿಸುತ್ತಿರುತ್ತವೆ. ದ್ವಿಚಕ್ರ ವಾಹನ ಸವಾರರು ಜೀವ ಭಯದಲ್ಲೇ ಸಂಚರಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ನೆಲಕ್ಕುರಳಬೇಕಾಗುತ್ತದೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೂ ಈ ರಸ್ತೆಯ ಬಗ್ಗೆ ಗಮನ ಹರಿಸುತ್ತಿಲ್ಲ. ದಿನನಿತ್ಯ ಸಂಚರಿಸುವ ಕ್ರಷರ್ ಲಾರಿಗಳು ಮತ್ತು ಟಿಪ್ಪರ್ ಗಳ ಹಾವಳಿಯಿಂದಾಗಿ ರಸ್ತೆ ಹದಗೆಟ್ಟಿದೆ.

ಈಗಾಗಲೇ ಹಲವು ವಾಹನ ಸವಾರರು ಕೆಳಕ್ಕೆ ಬಿದ್ದು ಪೆಟ್ಟು ಮಾಡಿಕೊಂಡಿದ್ದು, ಹೆಚ್ಚಿನ ಅವಘಢಗಳು ಸಂಭವಿಸುವ ಮುನ್ನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ರಸ್ತೆ ದುರಸ್ಥಿ ಪಡಿಸುವಂತೆ ಆಗ್ರಹಿಸಿದರು.