ಮೈಸೂರು : ಜು.೧೫ : ಮೈಸೂರು ಸಂಸ್ಥಾನ ವಿಶ್ವದಲ್ಲಿಯೇ ಪ್ರಸಿದ್ಧಿಯಾಗಲು ಮೈಸೂರು ರಾಜ್ಯವನ್ನಾಳಿದ ಮಹಾರಾಜರುಗಳ ಜೊತೆಗೆ ಮುಮ್ಮಡಿಕೃಷ್ಣರಾಜ ಒಡೆಯರ್‌ರವರ ಕೊಡುಗೆಯು ಅಪಾರವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.
ಜೆ.ಎಲ್.ಬಿ. ರಸ್ತೆಯಲ್ಲಿರುವ ಜೂನಿಯರ್ ಮಹಾರಾಜ ಕಾಲೇಜು ಆವರಣದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರ ೨೨೪ನೇ ಜಯಂತಿಯ ಅಂಗವಾಗಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ಒಳ್ಳೆಯ ಕವಿಗಳಾಗಿದ್ದರು. ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮುಖಾಂತರ ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದರು. ಅವರ ತತ್ವಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮೈಸೂರನ್ನು ಆಳಿದ ರಾಜರುಗಳು ದೂರದೃಷ್ಟಿ ಉಳ್ಳಂತಹವರಾಗಿದ್ದರು. ಮೈಸೂರನ್ನು ಸುಂದರ ನಗರವನ್ನಾಗಿ ಕಟ್ಟಿದ್ದಾರೆ. ಅಗಲವಾದ ರಸ್ತೆಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯ, ನೀರಾವರಿ ಯೋಜನೆಗಳು, ಆಸ್ಪತ್ರೆಗಳನ್ನು ನಿರ್ಮಿಸಿ ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ಮೈಸೂರು ದಸರಾ ಜಗತ್ತಿಗೆ ಪ್ರಸಿದ್ಧವಾಗಿದೆ. ಮೈಸೂರು ಪ್ರವಾಸಿಗರ ತಾಣವಾಗಿದೆ. ಅರಮನೆ, ಚಾಮುಂಡಿಬೆಟ್ಟ, ಪ್ರಾಣಿಸಂಗ್ರಹಾಲಯ ಜನರನ್ನು ಆಕರ್ಷಿಸುತ್ತಿವೆ.
ಆದ್ದರಿಂದ ಇಂತಹ ಮಹಾನೀಯರನ್ನು ನಾವು ಪ್ರತಿನಿತ್ಯ ನೆನೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್.ಕೆ. ರಾಮು, ರಘುರಾಂ ವಾಜಪೇಯಿ, ದಿನೇಶ್‌ಗೌಡ, ಕನ್ನಡಪರ ಸಂಘಟನೆಯ ಮುಖಂಡರು ಹಾಜರಿದ್ದರು.