ಮುಂಬೈ: ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಬುಧವಾರ ಭೀಕರ ರೈಲು ದುರಂತ ಸಂಭವಿಸಿದ್ದು, ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ.
ಪುಷ್ಪಕ್ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಏಕಾಏಕಿ ರೈಲಿನಿಂದ ಇಳಿದು ಪಕ್ಕದ ಹಳಿ ಮೇಲೆ ನಿಂತಿದ್ದ ಪ್ರಯಾಣಿಕರ ಮೇಲೆ ಮತ್ತೊಂದು ರೈಲು ಹರಿದ ಪರಿಣಾಮ 8 ಜನರು ಸಾವನ್ನಪ್ಪಿದ್ದಾರೆ.
ಪರಾಂಡ ರೈಲು ನಿಲ್ದಾಣದ ಬಳಿ ಬುಧವಾರ ಸಂಜೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿತು. ಇದರಿಂದ ಬೆಚ್ಚಿದ ಪ್ರಯಾಣಿಕರು ಏಕಾಏಕಿ ರೈಲಿನಿಂದ ಜಿಗಿದಿದ್ದಾರೆ.
ರೈಲಿನಿಂದ ಜಿಗಿದ ನೂರಾರು ಪ್ರಯಾಣಿಕರು ಖಾಲಿ ಇದ್ದ ಪಕ್ಕದ ಹಳಿಯ ಮೇಲೆ ಇದ್ದಾಗ ಏಕಾಏಕಿ ಮತ್ತೊಂದು ಹಳಿ ಮೇಲೆ ಬಂದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹಳಿ ಮೇಲೆ ಇದ್ದವರ ಮೇಲೆ ಹರಿದಿದೆ.
ದೆಹಲಿಯಿಂದ ಬೆಂಗಳೂರಿಗೆ ಕರ್ನಾಟಕ ಎಕ್ಸ್‌ಪ್ರೆಸ್ ಬರುತ್ತಿದ್ದರೆ, ಪುಷ್ಪಕ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಮುಂಬೈಗೆ ಬರುತ್ತಿತ್ತು.
ಘಟನೆಯ ಮಾಹಿತಿ ಪಡೆದ ರೈಲ್ವೇ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.