ಮಹಾರಾಷ್ಟ್ರ: ಭಾನುವಾರ ಮಹಾರಾಷ್ಟ್ರದಲ್ಲಿ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಶಿವಸೇನಾ ಶಾಸಕ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾನುವಾರ ನಡೆದ ಸಂಪುಟ ವಿಸ್ತರಣೆ ವೇಳೆ ಬಿಜೆಪಿಯಿಂದ 19 ಮಂದಿ, ಶಿವಸೇನೆಯಿಂದ 11 ಮಂದಿ, ಎನ್ ಸಿಪಿಯಿಂದ 9 ಮಂದಿ ಸಚಿವರಾಗಿ ಪದಗ್ರಹಣ ಮಾಡಿದ್ದಾರೆ. ಈ ವೇಳೆ ಭಂಡಾರಾ ಕ್ಷೇತ್ರದ ಶಾಸಕ ನರೇಂದ್ರ ಭೋಂಡೇಕರ್ ಅವರಿಗೆ ಸ್ಥಾನ ನಿರಾಕರಿಸಲಾಗಿತ್ತು, ಇದರಿಂದ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕೋಪಗೊಂಡ ಭಂಡಾರಾ ಶಾಸಕ ನರೇಂದ್ರ ಭೋಂಡೇಕರ್ ಅವರು ಶಿವಸೇನೆಯ ಉಪನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಏಕನಾಥ್ ಶಿಂಧೆ ಅವರು ನರೇಂದ್ರ ಭೋಂಡೇಕರ್ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು ಆದರೆ ಕೊನೆಯಲ್ಲಿ ಸ್ಥಾನ ನಿರಾಕರಿಸಲಾಗಿದೆ ಎನ್ನಲಾಗಿದೆ.
ಉದಯ್ ಸಮಂತ್ (ಕೋಕನ್), ಶಂಭುರಾಜೇ ದೇಸಾಯಿ (ಪಶ್ಚಿಮ ಮಹಾರಾಷ್ಟ್ರ), ಗುಲಾಬ್ರಾವ್ ಪಾಟೀಲ್ (ಉತ್ತರ ಮಹಾರಾಷ್ಟ್ರ), ದಾದಾ ಭೂಸೆ (ಉತ್ತರ ಮಹಾರಾಷ್ಟ್ರ), ಸಂಜಯ್ ರಾಥೋಡ್ (ವಿದರ್ಭ) ಮತ್ತು ಯೋಗೇಶ್ ಕದಮ್ ಅವರಿಗೆ ಶಿವಸೇನೆ ಅವಕಾಶ ನೀಡಿದೆ. ಇವರೆಲ್ಲರಿಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.
ಮೂರು ಬಾರಿ ಶಾಸಕರಾಗಿದ್ದ ನರೇಂದ್ರ ಭೋಂಡೇಕರ್ :
ನರೇಂದ್ರ ಭೋಂಡೇಕರ್ ಅವರು 2009ರಲ್ಲಿ ಅವಿಭಜಿತ ಶಿವಸೇನೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಬಿಜೆಪಿಯ ರಾಮಚಂದ್ರ ಅವಸಾರೆ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2019 ರಲ್ಲಿ, ನರೇಂದ್ರ ಭೋಂಡೆಕರ್ ಅವರು ಸ್ವತಂತ್ರವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿಯ ಅರವಿಂದ್ ಮನೋಹರ್ ಅವರನ್ನು ಸೋಲಿಸಿದರು. ಇದಾದ ಬಳಿಕ 2022 ರಲ್ಲಿ ಶಿವಸೇನೆ ವಿಭಜನೆಯಾದಾಗ, ನರೇಂದ್ರ ಭೋಂಡೆಕರ್ ಏಕನಾಥ್ ಶಿಂಧೆ ಬಣವನ್ನು ಸೇರಿದರು. 2024 ರಲ್ಲಿ, ನರೇಂದ್ರ ಭೋಂಡೇಕರ್ ಮತ್ತೊಮ್ಮೆ ಭಂಡಾರಾದಿಂದ ಚುನಾವಣೆಗೆ ಸ್ಪರ್ಧಿಸಿದರು ಮತ್ತು 127,884 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ನ ಪೂಜಾ ಗಣೇಶ್ ಥಾವ್ಕರ್ ಅವರನ್ನು ಸೋಲಿಸಿದರು.